Home ಕರಾವಳಿ ಹಿಜಾಬ್ ಕುರಿತು ಹೇಳಿಕೆ: ಯು.ಟಿ.ಖಾದರ್ ವಿರುದ್ಧ ತೀವ್ರಗೊಂಡ ಆಕ್ರೋಶ

ಹಿಜಾಬ್ ಕುರಿತು ಹೇಳಿಕೆ: ಯು.ಟಿ.ಖಾದರ್ ವಿರುದ್ಧ ತೀವ್ರಗೊಂಡ ಆಕ್ರೋಶ

►►ಶಾಸಕರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್


ಮಂಗಳೂರು
: ಹಿಜಾಬ್ ಗಾಗಿ ಹೋರಾಟ ಮಾಡುತ್ತಿರುವ ವಿದ್ಯಾರ್ಥಿನಿಯರ ವಿರುದ್ಧ ಹೇಳಿಕೆ ನೀಡಿರುವ ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅನ್ಯಾಯಕ್ಕೊಳಗಾದ ವಿದ್ಯಾರ್ಥಿನಿಯರ ಪರವಾಗಿ ನಿಲ್ಲಬೇಕಾದ ಶಾಸಕರು ತಮ್ಮ ರಾಜಕೀಯ ಲಾಭಕ್ಕೋಸ್ಕರ ಸಂಘಪರಿವಾರವನ್ನು ಮೆಚ್ಚಿಸಲು ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದು ನೆಟ್ಟಿಗರು ಟೀಕಾಪ್ರಹಾರ ನಡೆಸಿದ್ದಾರೆ.
ನ್ಯಾಯ ಕೇಳುವ ಸಹೋದರಿಯರು ನ್ಯಾಯಕ್ಕಾಗಿ ಪಾಕಿಸ್ತಾನಕ್ಕೋ ಸೌದಿ ಅರೇಬಿಯಾಗೋ ಹೋಗಿ ನೋಡಬೇಕು ಎಂದಾದರೆ ಬಿಜೆಪಿಯ ಅಜೆಂಡಾ ಸಂಪೂರ್ಣಗೊಂಡಂತೆ ಆಯಿತು ಎಂದು ಕಾಂಗ್ರೆಸ್ ಯುವ ಮುಖಂಡ ಸುಹೈಲ್ ಕಂದಕ್ ಟ್ವೀಟ್ ನಲ್ಲಿ ಟೀಕಿಸಿದ್ದಾರೆ.


ದಾರಿಮೀಸ್ ಅಸೋಸಿಯೇಷನ್ ಮುಖಂಡ, ಹಿರಿಯ ವಿದ್ವಾಂಸ, ಎಸ್. ಬಿ.ದಾರಿಮಿ, ಯುಟಿಕೆ ಹಿಜಾಬ್ ವಿದ್ಯಾರ್ಥಿನಿಯರಿಗೆ ಹೊರ ದೇಶದ ಪಾಠ ಹೇಳಿದ್ದು ಒಪ್ಪುವಂತಹದ್ದಲ್ಲ ಎಂದು ಹೇಳಿದ್ದಾರೆ. ಆದರೆ ಬಳಿಕ ಅವರು ತಮ್ಮ ಹೇಳಿಕೆಯನ್ನು ಫೇಸ್ ಬುಕ್ ನಿಂದ ಡಿಲೀಟ್ ಮಾಡಿದ್ದರೂ ಅವರ ಹೇಳಿಕೆಯ ಸ್ಕ್ರೀನ್ ಶಾಟ್ ವಾಟ್ಸಪ್ ನಲ್ಲಿ ಹರಿದಾಡುತ್ತಿದೆ.
ಝೈನುಲ್ ಆಬಿದೀನ್ ಎಂಬವರು ಟ್ವೀಟ್ ಮಾಡಿ, ಇದು ಯು ಟಿ ಖಾದರ್ ಹೇಳಿಕೆಯೋ ಅಥಾವ ಕಾಂಗ್ರೆಸ್ ಪಕ್ಷದ ಹೇಳಿಕೆಯೋ ಬಹಿರಂಗಪಡಿಸಿ, ಜಾತ್ಯತೀತ ಸೊಬಗಿನ ಸ್ವಯಂಘೋಷಿತ ಮುಸ್ಲಿಮರ ರಕ್ಷಕರೇ?, ಖಂಡಿತ ನಿಮ್ಮ ಮೌನ ಮುರಿಯುವ ದಿನ ದೂರವಿಲ್ಲ, ಚುನಾವಣೆ ಸಮೀಪವಿದೆ ಎಂದು ಕಾಂಗ್ರೆಸ್, ಡಿಕೆಶಿ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ರಾಹುಲ್ ಗಾಂಧಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಮಾತ್ರವಲ್ಲ ಯು.ಟಿ.ಖಾದರ್ ಅವರನ್ನು ಪಕ್ಷದಿಂದ ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯೆ ಫಾತಿಮಾ ಉಸ್ಮಾನ್ ಟ್ವೀಟ್ ಮಾಡಿ, ಇಸ್ಲಾಮ್ ಮತ್ತು ಕುರ್ ಆನ್ ಇಡೀ ಪ್ರಪಂಚಕ್ಕೆ ಒಂದೇ ಸಂದೇಶವನ್ನು ಸಾರುತ್ತದೆ ಎನ್ನುವ ಕನಿಷ್ಠ ಜ್ಞಾನವನ್ನು ತಿಳಿದುಕೊಳ್ಳಿ ಮಾನ್ಯ ಯುಟಿ ಖಾದರ್ ಅವರೇ, ತಾವುಗಳು ಕೂಡ ಸಂಘಪರಿವಾರದವರೊಂದಿಗೆ ಸೇರಿಕೊಂಡು ಇಸ್ಲಾಮಿನ ಆದರ್ಶವನ್ನು ಸೋಲಿಸಲು ಶ್ರಮಿಸುವುದಾದರೆ ಅದು ತಮ್ಮಿಂದ ಸಾಧ್ಯವಿಲ್ಲ ಎಂದು ಅರಿಯಿರಿ ಎಂದು ಕಿಡಿಕಾರಿದ್ದಾರೆ.
“ಇವರು ಉಳ್ಳಾಲದಿಂದ ಹೊರಗೆ ಓಟಿಗೆ ನಿಲ್ಲಲಿ, ಲಿಬರ್ಟಿ ಗೊತ್ತಾಗುತ್ತದೆ. ಶೇ. 56.10 ರಷ್ಟು ಮುಸ್ಲಿಮರು ಇರುವ ಕ್ಷೇತ್ರದಿಂದ ಗೆದ್ದು ಅವರ ಲಿಬರ್ಟಿಯ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಬೇರೆ ಕ್ಷೇತ್ರದಲ್ಲಿ ನಿಂತರೆ ಲಿಬರ್ಟಿ ಬಿಡಿ, ಠೇವಣಿ ಉಳಿಸುವುದು ಕಷ್ಟ ಎಂದು ಮತ್ತೊಬ್ಬರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಟ್ವೀಟ್ ಮಾಡಿ, ಒಂದು ಹಿಜಾಬ್ ಧಾರಿಣಿ ವಿದ್ಯಾರ್ಥಿನಿಯ ತಂದೆಯಾಗಿ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದುಕೊಂಡು ಸಾಂವಿಧಾನಿಕ ಹಕ್ಕಿನ ಪರ ಧ್ವನಿ ಎತ್ತಿದ ವಿಧ್ಯಾರ್ಥಿನಿಯರನ್ನೇ ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ @utkhader ನಡೆ ಖಂಡನಾರ್ಹ. ಇಂತಹ ಹೇಳಿಕೆ ಸಾಂವಿಧಾನಿಕ ಹಕ್ಕನ್ನು ಕಸಿಯುತ್ತಿರುವ @BJP4Karnataka ಪ್ರಯತ್ನಕ್ಕೆ ಕೈಜೋಡಿಸಿದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ ಟ್ವೀಟ್ ಮಾಡಿ, ಮಾನ್ಯ @Utkhadar ರವರೇ ಹಿಜಾಬ್ ವಿದ್ಯಾರ್ಥಿನಿಯರಿಗಿಂತಲೂ ತಾವು ದೇಶದ ಸ್ವಾತಂತ್ರ್ಯ ಹಾಗೂ ಸಾಂವಿಧಾನಿಕ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ನಿಮ್ಮಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರಿಗೆ ಇಂತಹ ಹೇಳಿಕೆಗಳು ಭೂಷಣವಲ್ಲ !! #WeStandWithHijab ಎಂದು ತಿರುಗೇಟು ನೀಡಿದ್ದಾರೆ.
ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ ಹಿಜಾಬ್ ವಿವಾದ ವಿಚಾರಕ್ಕೆ ಸಂಬಂಧಿಸಿ ಸೋಮವಾರ ಮಂಗಳೂರಿನಲ್ಲಿ ಮಾತನಾಡಿದ್ದ ಯು.ಟಿ. ಖಾದರ್, ಹಿಜಾಬ್ ಬಗ್ಗೆ ಪಟ್ಟು ಹಿಡಿದ ವಿದ್ಯಾರ್ಥಿನಿಯರು ಒಮ್ಮೆ ಪಾಕಿಸ್ತಾನ, ಸೌದಿಯಂತಹ ದೇಶಗಳಿಗೆ ಹೋಗಲಿ, ಆಗ ನಮ್ಮ ದೇಶದ ಮಹತ್ವ ಗೊತ್ತಾಗುತ್ತದೆ. ಹಿಜಾಬ್ ಗಾಗಿ ಹಠ ಹಿಡಿದವರು ಕಾನೂನಿನ ವಿರುದ್ಧ ಮಾತನಾಡುವವರು ಇಲ್ಲಿನ ಸ್ವಾತಂತ್ರ್ಯದ ಬಗ್ಗೆ ತಿಳಿದುಕೊಳ್ಳಬೇಕು, ಇಲ್ಲಿ ಬೇಕಾದ ಹಾಗೆ ಮಾತನಾಡೋದು, ಡಿಸಿಯನ್ನು ಭೇಟಿಯಾಗೋದು, ಪ್ರೆಸ್ ಮೀಟ್ ಕರೆಯೋದು ಎಲ್ಲವನ್ನೂ ಮಾಡಬಹುದು, ಆದರೆ ಅದನ್ನೇ ವಿದೇಶಕ್ಕೆ ಹೋಗಿ ಮಾತನಾಡಲಿ ಇಲ್ಲಿ ಹುಲಿಯ ಹಾಗೆ ಇದ್ದವರು, ಅಲ್ಲಿ ಬೆಕ್ಕಿನ ತರಹ ಆಗುತ್ತಾರೆ ಎಂದು ವ್ಯಂಗ್ಯವಾಡಿದ್ದರು.
ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆ ವೀಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಅವರು, ತಾವು ಹಿಜಾಬ್ ವಿದ್ಯಾರ್ಥಿನಿಯರ ವಿರುದ್ಧವಾಗಿ ಹಾಗೇ ಹೇಳಿಲ್ಲ ಎಂದು ಸಮಜಾಯಿಷಿ ನೀಡಿದ್ದರು.
ಆದರೂ ತಾವು ಯಾರ ವಿರುದ್ಧ ಈ ಹೇಳಿಕೆ ನೀಡಿದ್ದೆ ಎಂಬುದನ್ನು ಅವರು ವೀಡಿಯೋದಲ್ಲಿ ಸ್ಪಷ್ಟಪಡಿಸಿಲ್ಲ.

Join Whatsapp
Exit mobile version