ಲಖನೌ: ಹೋಳಿ ಆಚರಣೆ ವೇಳೆ ಬೈಕ್‌ನಲ್ಲಿ ಹೋಗುತ್ತಿದ್ದ ಮುಸ್ಲಿಂ ಸಮುದಾಯದ ಮೂವರಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯ ಧಾಂಪುರದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಅದರಲ್ಲಿ ಮೂವರು ಅಪ್ರಾಪ್ತ ವಯಸ್ಸಿನವರಾಗಿದ್ದಾರೆ.
ಹೋಳಿ ಆಚರಿಸುತ್ತಿದ್ದವರು ಬಲವಂತವಾಗಿ ಮೂವರಿಗೂ ಬಣ್ಣ ಎರಚಿರುವುದು, ಅವರ ಮೇಲೆ ಬಣ್ಣದ ನೀರು ಸುರಿದಿರುವ ವಿಡಿಯೊ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಮಹಿಳೆಯು ವಿರೋಧ ವ್ಯಕ್ತಪಡಿಸಿ ಬಣ್ಣ, ನೀರು ಹಾಕದಂತೆ ಹೇಳಿದರೂ ಯುವಕರು ಕೇಳುವುದಿಲ್ಲ. ಒಬ್ಬ ಯುವಕ ದಾರಿಹೋಕರಿಗೂ ಬಣ್ಣ ಎರಚುವುದು ಸಂಪ್ರದಾಯ ಎಂದಿದ್ದಾನೆ. ಕೆಲವರು ಧಾರ್ಮಿಕ ಘೋಷಣೆಗಳನ್ನೂ ಕೂಗಿದ್ದಾರೆ. ಈ ವಿಡಿಯೊ ಜಾಲತಾಣಗಳಲ್ಲಿ ಹಾರಿದಾಡಿದ ಬಳಿಕ ಪೊಲೀಸರು ಕಿರುಕುಳ ನೀಡಿದವರನ್ನು ವಶಕ್ಕೆ ಪಡೆದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ. ಹೋಳಿ ಆಚರಣೆ ನೆಪದಲ್ಲಿ ಇತರರಿಗೆ ಕಿರುಕುಳ ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಸಿದ್ದಾರೆ.