Home ಗಲ್ಫ್ ಮಂಗಳೂರು ಮೂಲದ ಇಬ್ಬರು ಯುವಕರು ಓಮಾನ್ ನಲ್ಲಿ ನೀರುಪಾಲು

ಮಂಗಳೂರು ಮೂಲದ ಇಬ್ಬರು ಯುವಕರು ಓಮಾನ್ ನಲ್ಲಿ ನೀರುಪಾಲು

ಮಸ್ಕತ್: ಮಂಗಳೂರು ಮೂಲದ ಇಬ್ಬರು ಯುವಕರು ನೀರುಪಾಲಾದ ಘಟನೆ 27-8-2021 ರಂದು ಒಮಾನ್ ನ ಬೃಹತ್ ಕೈಗಾರಿಕಾ ವಲಯ ದುಕುಮ್ ಎಂಬಲ್ಲಿನ ಮಾವೂತ್ ಪ್ರದೇಶದ ಅಲ್ ಕಲುಫ್ ಬೀಚ್ ನಲ್ಲಿ ನಡೆದಿದೆ.

ಈ ಪೈಕಿ ಓರ್ವ ಯುವಕನ ಮೃತದೇಹ ಸಂಜೆಯ ವೇಳೆ ಪತ್ತೆಯಾಗಿದ್ದು, ಇನ್ನೊಂದು ಮೃತದೇಹದ ಶೋಧ ಕಾರ್ಯ ಮುಂದುವರಿದಿದೆ. ಮೃತಪಟ್ಟವರನ್ನು ಝಮೀರ್ ಕೋಟೆಪುರ ಮತ್ತು ರಿಝ್ವಾನ್ ಅಳೇಕಲ (24) ಎಂದು ಗುರುತಿಸಲಾಗಿದೆ. ಈ ಪೈಕಿ ಝಮೀರ್ ಮೃತದೇಹ ಪತ್ತೆಯಾಗಿದ್ದು, ರಿಝ್ವಾನ್ ಮೃತದೇಹದ ಹುಡುಕಾಟದಲ್ಲಿ ಪೊಲೀಸ್ ಇಲಾಖೆ ನಿರತವಾಗಿದೆ.

ಒಮಾನ್ ನಲ್ಲಿ ಲಾಕ್ ಡೌನ್ ಸಂಪೂರ್ಣವಾಗಿ ತೆರವುಗೊಂಡ ಬಳಿಕದ ಮೊದಲ ಶುಕ್ರವಾರವಾದ ಇಂದು ಕಂಪೆನಿಯ 18ರಷ್ಟು ಮಂದಿ ಉದ್ಯೋಗಿಗಳು ಒಟ್ಟಾಗಿ ವಾಹನದಲ್ಲಿ ಬೀಚ್ ಪ್ರದೇಶಕ್ಕೆ ತೆರಳಿದ್ದರು. ದುಕುಮ್ ನಿಂದ ಸುಮಾರು 150 ಕಿ. ಮೀ. ದೂರದ ಈ ಬೀಚ್ ನಲ್ಲಿ ಈಜಲು ಇಳಿದ ಯುವಕರ ಪೈಕಿ ನಾಲ್ಕು ಮಂದಿ ನೀರುಪಾಲಾಗಿದ್ದು, ಈ ಪೈಕಿ ಇಬ್ಬರನ್ನು ರಕ್ಷಿಸಲಾಗಿತ್ತು. ರಿಝ್ವಾನ್ ಮತ್ತು ಝಮೀರ್ ಕೋಟೆಪುರ ಇಬ್ಬರೂ ಈಜು ಬಲ್ಲವರಾಗಿದ್ದರೂ ನೀರಿನ ಆಳಕ್ಕೆ ಸಿಲುಕಿ ಮೃತಪಟ್ಟಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಝಮೀರ್ ರವರ ಕಿರಿಯ ಸಹೋದರನಿಗೆ ವಿವಾಹ ನಡೆದಿದ್ದು, ಮದುವೆ ಸಂಭ್ರಮದ ಮನೆಯಲ್ಲಿ ಇದೀಗ ದುಃಖ ಮಡುಗಟ್ಟಿದೆ.

ಸ್ಥಳಕ್ಕೆ ಧಾವಿಸಿದ ಸೋಶಿಯಲ್ ಫೋರಮ್ ಒಮಾನ್ ತಂಡವು ಕಂಪೆನಿಯ ಪಿ. ಆರ್. ನೊಂದಿಗೆ ಮಾತುಕತೆ ನಡೆಸಿ, ಮುಂದಿನ ದಾಖಲೆ ಪತ್ರದ ಪ್ರಕ್ರಿಯೆಗಾಗಿ ಕಂಪೆನಿಯ ಮಾಲಕರೊಂದಿಗೆ ನಿರಂತರ ಸಂಕಪರ್ಕದಲ್ಲಿದ್ದು, ಎಲ್ಲ ರೀತಿಯ ಸಹಕಾರ ನೀಡುತ್ತಿದೆ.

Join Whatsapp
Exit mobile version