Home ಕರಾವಳಿ ಮಂಗಳೂರು | ಜವಳಿ ವ್ಯಾಪಾರಕ್ಕೆ ಹೋಗಿದ್ದ ಇಬ್ಬರು ಯುವಕರ ಮೇಲೆ ಗುಂಪಿನಿಂದ ಮಾರಣಾಂತಿಕ ಹಲ್ಲೆ: ಸಂತ್ರಸ್ತರ...

ಮಂಗಳೂರು | ಜವಳಿ ವ್ಯಾಪಾರಕ್ಕೆ ಹೋಗಿದ್ದ ಇಬ್ಬರು ಯುವಕರ ಮೇಲೆ ಗುಂಪಿನಿಂದ ಮಾರಣಾಂತಿಕ ಹಲ್ಲೆ: ಸಂತ್ರಸ್ತರ ವಿರುದ್ಧವೇ ದೂರು

ನಾವು ಮುಸ್ಲಿಮರಾಗಿರುವುದೇ ಹಲ್ಲೆಗೆ ಕಾರಣ ಎಂದ ಸಂತ್ರಸ್ತರು

ಮಂಗಳೂರು: ಇಬ್ಬರು ಮುಸ್ಲಿಮ್ ಜವಳಿ ವ್ಯಾಪಾರಿಗಳನ್ನು ತಡೆದು ನಿಲ್ಲಿಸಿದ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಕಡಬ ಕಾಣಿಯೂರು ಎಂಬಲ್ಲಿ ನಡೆದಿದ್ದು, ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ.


ಆದರೆ ಹಲ್ಲೆಗೊಳಗಾದವರು ದೂರು ನೀಡಿದ ಬಳಿಕ ಮಹಿಳೆಯೊಬ್ಬರು ದೂರು ನೀಡಿದ್ದು, ಅದರ ಆಧಾರದಲ್ಲಿ ಹಲ್ಲೆಗೊಳಗಾದವರ ವಿರುದ್ಧವೇ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.
ಅಡ್ಡೂರು ನಿವಾಸಿಗಳಾದ ರಫೀಕ್ ಹಾಗೂ ರಮೀಝುದ್ದೀನ್ ಹಲ್ಲೆಗೊಳಗಾದವರು.
ಹಲವು ವರ್ಷಗಳಿಂದ ಜವಳಿ ವ್ಯಾಪಾರ ಮಾಡುತ್ತಿದ್ದ ರಫೀಕ್ ಮತ್ತು ರಮೀಸುದ್ದೀನ್ ಈ ಮೊದಲು ದ್ವಿಚಕ್ರ ವಾಹನದಲ್ಲಿ ಹಳ್ಳಿ ಹಳ್ಳಿಗಳಿಗೆ ತೆರಳಿ ಜವಳಿ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಕಾರು ಖರೀದಿಸಿ ಜವಳಿ ವ್ಯಾಪಾರ ಮುಂದುವರಿಸಿದ್ದರು.


ನಿನ್ನೆ ಕಡಬ ತಾಲೂಕಿನ ದೋಲ್ಪಾಡಿ ಗ್ರಾಮಕ್ಕೆ ಜವಳಿ ವ್ಯಾಪಾರಕ್ಕೆ ಹೋಗಿದ್ದಾರೆ. ಗ್ರಾಮದ ಮಹಿಳೆಯೊಬ್ಬರು ಜವಳಿ ಖರೀದಿಸಲು ಮುಂದಾಗಿದ್ದು, ಈ ವೇಳೆ ಅವರು ಚೌಕಾಶಿ ನಡೆಸಿದ್ದಾರೆ. ಅಲ್ಲಿಂದ ಅವರಿಬ್ಬರೂ ತೆರಳಿದಾಗ ಮಾರ್ಗ ಮಧ್ಯೆ ಗುಂಪೊಂದು ಅವರನ್ನು ತಡೆದು ನಿಲ್ಲಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆಯಿಂದ ಪ್ರಜ್ಞೆ ತಪ್ಪಿದ ಬಳಿಕ ಗುಂಪು ಅಲ್ಲಿಂದ ತೆರಳಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರೇ ಅವರಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.


ವಿಷಯ ತಿಳಿದ ತಕ್ಷಣ ಕುಟುಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ಈ ಮಧ್ಯೆ ಅದೇ ಗ್ರಾಮದ ಮಹಿಳೆಯೊಬ್ಬರಿಂದ ಮಾನಭಂಗದ ಸುಳ್ಳು ದೂರು ಕೊಡಿಸಲಾಗಿದೆ. ಇದೀಗ ಹಲ್ಲೆಗೊಳಗಾಗಿ ಗಂಭೀರ ಗಾಯಗೊಂಡಿರುವ ಸಂತ್ರಸ್ತರೇ ಆರೋಪಿಗಳೆಂದು ಬಿಂಬಿಸಲಾಗಿದೆ ಎಂದು ರಫೀಕ್ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.
ಸದ್ಯ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಮತ್ತೊಮ್ಮೆ ದೂರು ನೀಡಲು ಕುಟುಂಬಸ್ಥರು ಮುಂದಾಗಿದ್ದಾರೆ.

Join Whatsapp
Exit mobile version