ಕಾಸರಗೋಡು: ಶೌಚಾಲಯದ ಗುಂಡಿಗೆ ಬಿದ್ದು ಎರಡು ವರ್ಷದ ಬಾಲಕ ಮೃತಪಟ್ಟ ಘಟನೆ ಉಪ್ಪಳದಲ್ಲಿ ನಡೆದಿದೆ.
ಉಪ್ಪಳ ದ ಅಬ್ದುಲ್ ಸಮದ್-ಅನೀಸಾ ದಂಪತಿಯ ಪುತ್ರ ಅಬ್ದುಲ್ ರಹ್ಮಾನ್ ಸಹದಾದ್(2) ಮೃತಪಟ್ಟ ಬಾಲಕ.
ಸಮದ್ ಅವರ ಮನೆಯ ಶೌಚಾಲಯದ ಒಂದು ಭಾಗ ಬಿರುಕು ಬಿಟ್ಟಿದ್ದು, ಬಾಲಕ ತಿಳಿಯದೆ ಇದರ ಮೇಲೆ ನಡೆದು ಕೊಂಡು ಹೋದಾಗ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬಾಲಕನನ್ನು ಹೊರ ತೆಗೆದಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಬಾಲಕ ಮೃತಪಟ್ಟಿದ್ದಾನೆ.
ದುಬೈನಲ್ಲಿ ಕಾಸ್ಮೆಟಿಕ್ ವ್ಯಾಪಾರಿಯಾಗಿರುವ ಅಬ್ದುಲ್ ಸಮದ್ ಇತ್ತೀಚೆಗೆ ರಜೆಯ ನಿಮಿತ್ತ ಊರಿಗೆ ಬಂದಿದ್ದರು. ತನ್ನ ಕುಟುಂಬದೊಂದಿಗೆ ಸಂತೋಷದ ರಜಾದಿನಗಳನ್ನು ಕಳೆಯುತ್ತಿದ್ದ ವೇಳೆ ಸಂಭವಿಸಿದ ಅನಿರೀಕ್ಷಿತ ದುರಂತವು ಅಬ್ದುಲ್ ಸಮದ್ ಅವರನ್ನು ಅಪಾರ ದುಃಖಕ್ಕೀಡುಮಾಡಿದೆ.