ತೀರ್ಥಹಳ್ಳಿ: ದನಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆಯಲೆತ್ನಿಸಿದ ಸಂಘಪರಿವಾರದ ಕಾರ್ಯಕರ್ತರ ಮೇಲೆ ಪಿಕ್ ಅಪ್ ಹತ್ತಿಸಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ನಡೆದಿದೆ.
ಮೇಳಿಗೆ ಹಳ್ಳಿಯಿಂದ ಫಾಲೋ ಮಾಡಿದ ಯುವಕರ ಮೇಲೆ ಬೆಜ್ಜವಳ್ಳಿಯಲ್ಲಿ ಪಿಕ್ ಅಪ್ ಹತ್ತಿಸಲಾಗಿದೆ. ಕುಡುಮಲ್ಲಿಗೆ ರೈಸ್ ಮಿಲ್ ಬಳಿಯೂ ಕೆಲವರ ಮೇಲೆ ವಾಹನ ಹತ್ತಿಸಲು ಪ್ರಯತ್ನಿಸಲಾಗಿದೆ ಎನ್ನಲಾಗಿದೆ.
ಸಹೋದರರಾದ ಕಿರಣ್(23) ಮತ್ತು ಚರಣ್(24) ಗಂಭೀರ ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಕಿತ್ತನಗದ್ದೆ ಮಂಜುನಾಥ್ ಎಂಬವರ ಪುತ್ರರು.
ಘಟನೆ ನಡೆದ ಬಳಿಕ ಆಸ್ಪತ್ರೆಯ ಮುಂದೆ ನೂರಾರು ಜನ ಸೇರಿದ್ದು ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಆರೋಪಿಗಳ ಬಂಧನಕ್ಕೆ ಗೃಹ ಸಚಿವರ ಸೂಚನೆ
ರಾಜ್ಯದಲ್ಲಿ ಅಕ್ರಮ ಗೋ ಸಾಗಾಟ ವಿರುದ್ಧ, ಕಠಿಣ ಕಾನೂನು ಜಾರಿಯಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ತೀರ್ಥಹಳ್ಳಿ ಘಟನೆಯ ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಲು, ನಿರ್ದೇಶಿಸಲಾಗಿದೆ, ಎಂದು ತಿಳಿಸಿದ್ದಾರೆ.
ದನ ಸಾಗಾಟಗಾರರನ್ನು ತಡೆಯಲು ಯತ್ನಿಸಿದ ಇಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವಿಷಯವನ್ನು ತಿಳಿದ, ಸಚಿವರು, “ಘಟನೆಯಲ್ಲಿ ಗಾಯಗೊಂಡ ಇಬ್ಬರು ಯುವಕರ ಚಿಕಿತ್ಸೆಗೆ ಮಣಿಪಾಲದಲ್ಲಿ ವ್ಯವಸ್ಥೆ ಮಾಡಲಾಗಿದೆ, ಮತ್ತು ಆರೋಪಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.
ಗಾಯಗೊಂಡ, ಇಬ್ಬರೂ ಯುವಕರನ್ನು, ತಕ್ಷಣ ತೀರ್ಥಹಳ್ಳಿ ಜೆ ಸಿ ಆಸ್ಪತ್ರೆಗೆ ಸೇರಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಚಿವರು, ಘಟನೆಯ ವಿಷಯ ತಿಳಿದು, ಆಸ್ಪತ್ರೆಗೆ ಧಾವಿಸಿ, ಯುವಕರನ್ನು ಸಂತೈಸಿದ್ದಲ್ಲದೆ, ಸೂಕ್ತ ಚಿಕಿತ್ಸೆ ದೊರಕಿಸಲೂ ನೆರವಾಗಿದ್ದಾರೆ.
ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಅಕ್ರಮ ಗೋ ಸಾಗಣೆ ಹೆಚ್ಚುತ್ತಿದೆ. ಒಂದು ತಿಂಗಳ ಹಿಂದೆ ನಡೆದ ಗುರುಮೂರ್ತಿ ಪ್ರಕರಣ ಇನ್ನು ತನಿಖೆಯಾಗಿಲ್ಲ. ಪ್ರತಿ ದಿನ ಗೋವುಗಳ ಕಳ್ಳ ಸಾಗಣೆ ನಡೆಯುತ್ತದೆ. ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದೂ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.