Home ಟಾಪ್ ಸುದ್ದಿಗಳು ವೃದ್ಧಾಪ್ಯದಲ್ಲೂ ಸ್ನಾತಕೋತ್ತರ ಪರೀಕ್ಷೆ ಬರೆದ ಇಬ್ಬರು ಹಿರಿಯ ನಾಗರಿಕರು…!

ವೃದ್ಧಾಪ್ಯದಲ್ಲೂ ಸ್ನಾತಕೋತ್ತರ ಪರೀಕ್ಷೆ ಬರೆದ ಇಬ್ಬರು ಹಿರಿಯ ನಾಗರಿಕರು…!

ವಿಜಯಪುರ : ಸರ್ಕಾರಿ ಸೇವೆಯ ನಿವೃತ್ತಿಯ ನಂತರವೂ ಪ್ರಾಯ ಲೆಕ್ಕಿಸದೇ ಇಬ್ಬರು ಹಿರಿಯ ನಾಗರಿಕರು ಸ್ನಾತಕೋತ್ತರ ಪರೀಕ್ಷೆ ಬರೆಯುವ ಮೂಲಕ ಯುವ ಸಮೂಹಕ್ಕೆ ಮಾದರಿಯಾಗಿದ್ದಾರೆ. ನಾಲ್ಕು ಸ್ನಾತಕೋತ್ತರ ಪದವಿ ಪಡೆದರೂ ಐದನೇ ಪದವಿಗೆ ಓರ್ವ ವೃದ್ಧರು ಪರೀಕ್ಷೆ ಬರೆದರೆ, ಇಂಗ್ಲೀಷ್ ಭಾಷೆಯಲ್ಲಿ ಜ್ಞಾನ ಸಂಪಾದನೆಗೆ ಮತ್ತೋರ್ವ ವೃದ್ಧರು ಸ್ನಾತಕೋತ್ತರ ಪದವಿ ಪರೀಕ್ಷೆ ಬರೆದಿದ್ದಾರೆ.

ಸರ್ಕಾರಿ ಸೇವಾ ನಿವೃತ್ತಿ ಎಂಬುವುದು ಕೇವಲ ವೃತ್ತಿಗೆ ಮಾತ್ರ ನಿವೃತ್ತಿ. ಜೀವನದಲ್ಲಿ ಜ್ಞಾನಾರ್ಜನೆ, ನಿರಂತರ ಚಟುವಟಿಕೆ ಹಾಗೂ ಕ್ರಿಯಾಶೀಲತೆಯಿಂದ ಇರಲು ಶೈಕ್ಷಣಿಕ ಜಾನ ಸಂಪಾದನೆ ಅತ್ಯಗತ್ಯ. ಹೀಗಾಗಿ ಈ ಇಬ್ಬರೂ ಹಿರಿಯರು ನಾಗರಿಕರು ವಿದ್ಯಾರ್ಜನೆಯನ್ನು ಮುಂದುವರೆಸಿದ್ದಾರೆ.

ನಿಂಗಯ್ಯ ಬಸಯ್ಯ ಒಡೆಯರ್(81) ಮತ್ತು ಪರಸಪ್ಪ ಮಡಿವಾಳ (66) ಎಂಬವರು ಪರೀಕ್ಷೆ ಬರೆದಿರುವ ಹಿರಿಯ ನಾಗರಿಕರಾಗಿದ್ದಾರೆ.

ಆರೋಗ್ಯ ಇಲಾಖೆಯ ನಿವೃತ್ತ ನೌಕರರಾಗಿರುವ ನಿಂಗಯ್ಯ ಬಸಯ್ಯ ಒಡೆಯರ್ ಈಗಾಗಲೇ ಇಗ್ನೋ ದಿಂದ 4 ಸ್ನಾತಕೋತ್ತರ ಪದವಿ ಪಡೆದಿದ್ದು, ಇದೀಗ 5ನೇ ಸ್ನಾತಕೋತ್ತರ ಪದವಿಗಾಗಿ ನಗರದ ಬಿಎಲ್ಡಿಲಇ ಸಂಸ್ಥೆಯ ಜೆಎಸ್ಎ ಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಟಿಇಇ ಪರೀಕ್ಷೆಯಲ್ಲಿ  ಎಂ.ಎ. ಇಂಗ್ಲೀಷ್ (ಎಂ.ಇ.ಜಿ.) ಪರೀಕ್ಷೆ ಬರೆದಿದ್ದಾರೆ.

ಸಿಂದಗಿ ಆರ್.ಡಿ.ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಸೇವೆ ಸಲ್ಲಿಸಿದ್ದ 66 ವರ್ಷದ ಪರಸಪ್ಪ ಮಡಿವಾಳ ಇದೀಗ ಇಂಗ್ಲೀಷ್ ಸ್ನಾತಕೋತ್ತರ ಪರೀಕ್ಷೆ ಬರೆದಿದ್ದಾರೆ.

 ಇಗ್ನೋ ಕೇಂದ್ರದ ಸಂಯೋಜಕ ಡಾ.ಮಂಜುನಾಥ ಕೋರಿ, ಜೆ ಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಭಾರತಿ ಸೇರಿದಂತೆ ಇತರರು  ಈ ಇಬ್ಬರು ಹಿರಿಯ ನಾಗರಿಕರ ಈ ವಿಶಿಷ್ಟ ಚಟುವಟಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Join Whatsapp
Exit mobile version