ಪಂಡಿತರ ರಕ್ಷಣೆ, ಅಲ್ಪಸಂಖ್ಯಾತರ ನಂಬಿಕೆ ಉಳಿಸಲು ಶ್ರೀನಗರದ ಎರಡು ಮಸೀದಿಗಳ ಕರೆ

Prasthutha|

ಶ್ರೀನಗರ : ಕಾಶ್ಮಿರ ಶ್ರೀನಗರದ ಎರಡು ಮಸೀದಿಗಳು ಅಕ್ಟೋಬರ್ 8ರ ಶುಕ್ರವಾರದ ನಮಾಝಿಗೆ ಮೊದಲು ಇಲ್ಲಿ ವಾಸಿಸುವ ಕಾಶ್ಮೀರಿ ಪಂಡಿತರಲ್ಲಿ ಧೈರ್ಯ ತುಂಬಲು ಕರೆ ನೀಡಿದ್ದು, ಕಾಶ್ಮೀರ ಪಂಡಿತರಲ್ಲಿ ಭಯ ಉಲ್ಭಣಿಸುವಂಥ ಯಾವುದೇ ಕೃತ್ಯಗಳಿಂದ ದೂರವಿರುವಂತೆ ಕೇಳಿಕೊಂಡಿದೆ.
ಕೆಪಿಎಸ್ ಎಸ್- ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿಯು ಈ ಕರೆಯನ್ನು ಶ್ಲಾಘಿಸಿದೆ. ಶ್ರೀನಗರ ಕಣಿವೆಯಲ್ಲಿ 800 ಪಂಡಿತ ಕುಟುಂಬಗಳು ವಾಸಿಸುತ್ತಿವೆ.

- Advertisement -


ಶ್ರೀನಗರ ಮತ್ತು ಬಂಡಿಪೋರ ಜಿಲ್ಲೆಗಳಲ್ಲಿ ಮೂವರು ಹಿಂದೂಗಳು, ಒಬ್ಬರು ಸಿಖ್ ಸಹಿತ 5 ಮಂದಿಯ ಕೊಲೆಯ ಬಳಿಕ ಈ ಹೇಳಿಕೆಗಳು ಮಹತ್ವವೆನಿಸಿವೆ. 1990ರ ಹಿಂಸಾಚಾರದಲ್ಲಿ ಹಲವು ಪಂಡಿತ ಕುಟುಂಬಗಳು ವಲಸೆ ಹೋದ ಹೊತ್ತಿನಲ್ಲೂ ಅಲ್ಲಿ ಉಳಿದ ಕಣಿವೆಯ ಖ್ಯಾತ ಪಾರ್ಮಾಸಿಸ್ಟ್ ಮಖನ್ ಲಾಲ್ ಬಿಂದ್ರೂ ಅವರ ಕೊಲೆ ನೂರಾರು ಕಾಶ್ಮೀರಿ ಪಂಡಿತರಲ್ಲಿ ಭೀತಿಯ ತರಂಗ ಎಬ್ಬಿಸಿತ್ತು.
ಈಗಿನ ಭೀತಿಯ ವಾತಾವರಣದ ಕಣಿವೆಯ ಸಮಾಜದಲ್ಲಿ ಯಾರು ಯಾರ ಬಗೆಗೂ ಕರುಣೆ ತೋರುವ ಪಾತ್ರದವರು ಇಲ್ಲ ಎಂಬುದು ಪಂಡಿತ ಜನರಲ್ಲಿನ ಈಗಿನ ಸಾಮಾನ್ಯ ನಂಬಿಕೆಯಾಗಿದೆ. ಆದರೆ ಶ್ರೀನಗರದ ಕೆಳ ಪೇಟೆಯ ಎರಡು ಮಸೀದಿಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ.


ಆ ಎರಡು ಮಸೀದಿಗಳಲ್ಲಿ ಒಂದು ಶ್ರೀನಗರದ ನಕಶ್ ಪೋರಾ ಪ್ರದೇಶದಲ್ಲಿದ್ದರೆ, ಇನ್ನೊಂದು ಸಾತು ಬರ್ಬಾರ್ ಶಾ ಪ್ರದೇಶದಲ್ಲಿ ಅಹ್ಲ್ ಎ ಹದೀಸ್ ಸಂಪ್ರದಾಯಸ್ಥ ಇಸ್ಲಾಮಿಕ್ ಶಾಲೆಯನ್ನು ಒಳಗೊಂಡಿದೆ.
ಹೇಳಿಕೆ ಹೊರಡಿಸಿದ ಮಸೀದಿಯ ಇಮಾಮ್ ರಿಯಾಝ್ ಬಟ್ ಅವರು “ಈ ಜನರು ನಮ್ಮ ಸಹೋದರರು, ಶತಮಾನಗಳಿಂದ ಇಲ್ಲಿ ಒಟ್ಟಿಗೆ ವಾಸಿಸುತ್ತಿದ್ದಾರೆ”. “ನಮ್ಮವರು ಈಗ ಏನಾದರೂ ಕೀಟಲೆ ಮಾಡಿದರೆ ಅದು ಅವರಲ್ಲಿ ಭಯ ಹೆಚ್ಚಿಸುತ್ತದೆ, ನಾವದನ್ನು ಬಯಸುವುದಿಲ್ಲ ಎಂದೂ ಅವರು ಹೇಳಿದರು.
ಬಟ್ ಅವರು ಮನವಿ ಮಾಡುತ್ತಾ “ನನ್ನ ಧರ್ಮದ ಮೌಲ್ಯಗಳು ನನಗೆ ನ್ಯಾಯ ಮತ್ತು ಮಾನವತೆಯನ್ನು ಕಲಿಸಿದೆ. ನಾನು ಅದನ್ನಷ್ಟೆ ಮಾಡಿದೆ. ನಾನು ನನ್ನವರಿಗೆ ವಿಶೇಷವಾಗಿ ಅಕ್ಲಿಯತ್ ಅರ್ಥಾತ್ ಅಲ್ಪಸಂಖ್ಯಾತರಿಗೆ ಮುಹಾಫಿಜ್ ಅಂದರೆ ರಕ್ಷಕರಾಗಿ ಇರಿ” ಎಂದು ಕರೆ ನೀಡಿದ್ದಾರೆ.

- Advertisement -


ಕೆಪಿಎಸ್ ಎಸ್ ತನ್ನ ವಾಟ್ಸ್ ಆಪ್ ಗುಂಪಿನಲ್ಲಿ “ಸಾಮಾಜಿಕ ಬದ್ಧತೆ ಪದ್ಧತಿಯ ಮೂಲಕ ಕಾಶ್ಮೀರ ಕಣಿವೆಯ ಎಲ್ಲ ಅಲ್ಪಸಂಖ್ಯಾಕರಲ್ಲಿ ನಂಬಿಕೆ ಬಲಯುತವಾಗುವಂತೆ ಎಲ್ಲ ಮಸೀದಿ ಸಮುದಾಯಗಳು ನಡೆದುಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ” ಎಂದು ಹಾಕಿದ್ದಾರೆ. ಅದೇ ವೇಳೆ ಶ್ರೀನಗರ ಕೆಳ ಪೇಟೆಯ ಎರಡು ಮಸೀದಿಗಳು ಈ ವಿಷಯದಲ್ಲಿ ತೆಗೆದುಕೊಂಡ ತೀರ್ಮಾನದ ಬಗೆಗೆ ಅವರನ್ನು ಅಭಿನಂದಿಸುವುದಾಗಿಯೂ ಅದರಲ್ಲಿ ಹಾಕಲಾಗಿದೆ.


ಭಯದಲ್ಲಿ ಪಂಡಿತರು
ಈ ನಡೆ ಸ್ವಾಗತಾರ್ಹ ಎನಿಸಿದರೂ, ಕಳೆದ ವಾರದ ಕೊಲೆಗಳಿಂದಾಗಿ ಸ್ಥಳೀಯ ಕಾಶ್ಮೀರಿ ಪಂಡಿತರಲ್ಲಿ ಕಳವಳ ಮನೆ ಮಾಡಿದೆ. ಆದ್ದರಿಂದ ಕೆಲವು ಕುಟುಂಬಗಳು ಸ್ಥಳ ಬದಲಿಸಿವೆ ಮತ್ತು ಸುರಕ್ಷತಾ ಕ್ರಮಗಳನ್ನು ಅಧಿಕರಿಸಿಕೊಂಡಿವೆ.
ಇಂಥವರನ್ನು ಮಾತನಾಡಿಸಿದಾಗ ಅವರು ಮಾಧ್ಯಮದವರಲ್ಲಿ ತಮ್ಮ ಹೆಸರು ಮತ್ತು ಸ್ಥಳ ಹೇಳಲು ಬಯಸಲಿಲ್ಲ.


ಶ್ರೀನಗರದ 23 ವರುಷದ ಕಾಶ್ಮೀರಿ ಪಂಡಿತ ವಿದ್ಯಾರ್ಥಿಯು “ನನ್ನ ಹೆತ್ತವರು ಕಳೆದ ವಾರದ ಘಟನೆಯಿಂದಾಗಿ 90ರ ದಶಕದ ಶೋಕದತ್ತ ಜಾರಿದರು” ಎಂದು ಹೇಳಿದ್ದಾನೆ. “ಹೆಚ್ಚಿನ ಪಂಡಿತ ಹಿರಿಯರು ತಮ್ಮ ಮಕ್ಕಳಿಗೆ ಆಗ ಏನಾಯಿತು ಎಂದು ಹೇಳಲು ಬಯಸುವುದಿಲ್ಲ. ನಾವು ಸಕಾರಾತ್ಮಕ ಮನೋಭಾವದೊಡನೆ ಬೆಳೆಯಲಿ ಎಂಬುದು ಅವರ ಬಯಕೆ. ಅಂಥದ್ದರಲ್ಲಿ ದಿಢೀರನೆ ಈ ಘಟನೆ ನಡೆದಿದೆ. ತುಂಬ ಚಿಂತಿತರಾಗಿರುವ ನನ್ನ ಹೆತ್ತವರು ನನ್ನನ್ನು ಈಗ ಹೊರಗೆ ಹೋಗಲು ಅನುಮತಿಸುವುದಿಲ್ಲ.” ಎಂದು ಆ ಯುವಕ ಹೇಳಿದ.
ಅಕ್ಟೋಬರ್ 6ರಂದು ಬುಧವಾರ ಶ್ರೀನಗರದ ಘಂಟಾಘರ್ ನಲ್ಲಿ ಎಂ. ಎಲ್. ಬಿಂದ್ರೂ ಸಹಿತ ಕೊಲೆಯಾದ ಮೂವರ ನೆನಪಿಗೆ ಮೇಣದ ಬತ್ತಿ ಪ್ರತಿಭಟನೆಯಲ್ಲಿ ಕಾಶ್ಮೀರಿ ಪಂಡಿತರು ಭಾಗವಹಿಸಿದರು.
ಕೆಲವು ಹೇಳಿಕೆಗಳ ಪ್ರಕಾರ 1990ರ ಗಲಭೆಯ ಬೆದರಿಕೆ ಮತ್ತು ಕೊಲೆಗಳಿಂದಾಗಿ 76,000 ಪಂಡಿತ ಜನರು ಕಾಶ್ಮೀರ ಕಣಿವೆ ತೊರೆದು ಹೋಗಿದ್ದಾರೆ.


ಆಗಿನ ಹತ್ಯಾಕಾಂಡದಲ್ಲಿ 850 ಜನ ಪಂಡಿತರು ಕೊಲೆಯಾದರು ಎಂದು ಕೆಪಿಎಸ್ ಎಸ್ ಹೇಳುತ್ತದೆ. ಈಗ ಕಾಶ್ಮೀರ ಕಣಿವೆಯ 242 ಸ್ಥಳಗಳಲ್ಲಿ 808 ಪಂಡಿತ ಕುಟುಂಬಗಳು ವಾಸಿಸುತ್ತಿವೆ.
ಅವರ ಪರ ನಿಲ್ಲುವವರ ಸಂಖ್ಯೆ ಕಡಿಮೆ ಇರುವುದರಿಂದ ಪಂಡಿತ ಸಮುದಾಯದಲ್ಲಿ ಗಾಬರಿಗೊಂಡವರಾಗಿದ್ದಾರೆ. ಬಹುಸಂಖ್ಯಾತ ಜನ ಸಮುದಾಯದವರ ಮೌನವು ನಮ್ಮನ್ನು ಪರಕೀಯರಾಗಿಸಿದ್ದಕ್ಕೆ ಒತ್ತು ನೀಡಿದೆ ಎನ್ನುತ್ತಾರೆ ಕೆಪಿಎಸ್ ಎಸ್ ನ ಟಿಕೂ.
“ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರ ಸಂಬಂಧವು ತುಂಬಿರುವುದು ಕ್ರಿಯಾತ್ಮಕತೆಯಲ್ಲಿ ಎಂಬುದು ಇಲ್ಲಿನ ಮೂಲ ಅಂಶ. ಒಬ್ಬಿಬ್ಬರು ಅಲ್ಪಸಂಖ್ಯಾತರ ಕೊಲೆ ನಡೆದರೂ ಸಮುದಾಯದ ಉಳಿದವರೆಲ್ಲರೂ ಭೀತಿಗೆ ಬೀಳುವ ಸ್ಥಿತಿ ಇದೆ. ಈಗ ನಮಗೆ ನಿಜವಾದ ಬೆಂಬಲ ಬೇಕಾಗಿದೆ, ಸಾಮಾಜಿಕ ಜಾಲ ತಾಣಗಳಲ್ಲಿ ಸಮಾಧಾನವಲ್ಲ. ನನ್ನ ಮನೆಗೆ ಬೆಂಬಲಿಸಿ 100 ಜನರಾದರೂ ಬರಲೆಂಬುದು ನನ್ನ ಆಶಯ. ಆಗ ಮಾತ್ರ ಭಯವಿಲ್ಲದೆ, ಯಾವುದೆ ಹೊರೆಯಿಲ್ಲದವನಂತೆ ನಿರಾಳವಾಗಿ ಇರಬಲ್ಲೆ; ಆದರೆ ಒಂದು ಹೃದಯ ಕೂಡ ಬಂದಿಲ್ಲ” ಎಂದರು ಟಿಕೂ.

90ನೇ ಇಸವಿ ಮರುಕಳಿಸೀತು ಎಂಬ ಭಯ ಅವರದು. “ನನಗನಿಸುತ್ತಿದೆ ಮಾನವೀಯ ಅಂಶಗಳು ಇಲ್ಲಿ ಅಭಿವೃದ್ಧಿ ಕಂಡಿಲ್ಲ. ಬಿಕ್ಕಟ್ಟಿನ ಈ ಕಣಿವೆಯಲ್ಲಿ ರೋಮಾಂಚಕ ನೀಡುವ ಸಮಾಜದ ಸಂಸ್ಕೃತಿ ಬೆಳೆದಿಲ್ಲ. ಇದು ನಮ್ಮನ್ನು ಹಿಮ್ಮಡಿಯ ಮೇಲೆ ನಿಲ್ಲಿಸುತ್ತಿದೆ” ಎಂದು ಅವರು ಹೇಳಿದರು.
ಬಿಂದ್ರೂ ಕೊಲೆ ಖಂಡಿಸಿ ಬಂದ್ ಕರೆ ನೀಡಲಾಗಿತ್ತು. ಆದರೆ ಅದು ಆಗಲಿಲ್ಲ. ಬದಲಿಗೆ ಮರುದಿನ ಇಬ್ಬರು ಟೀಚರ್ ಗಳ ಕೊಲೆಯಾಯಿತು. ತುಟಿ ಬಿಚ್ಚಿದ ಪ್ರತಿಭಟನೆ ಕೂಡ ನಡೆಯಲಿಲ್ಲ. ಅದು ನನ್ನನ್ನು ಮಾನಸಿಕವಾಗಿ ತುಂಬ ಬಾಧಿಸಿದೆ ಎಂದರು ಟಿಕೂ. ಮತ್ತೆ ಪಂಡಿತ ಕುಟುಂಬಗಳು ಗುಳೆ ಹೋಗುತ್ತವೆ ಎಂಬ ಗಾಳಿ ಸುದ್ದಿ ಇದೆ. ಆದರೆ ಕೆಪಿಎಸ್ ಎಸ್ ಪ್ರಕಾರ ಏಳು ಕುಟುಂಬಗಳು ಅಲ್ಲೇ ಸ್ಥಳ ಬದಲಾಯಿಸಿವೆ ಅಷ್ಟೆ. ಅವರೆಲ್ಲ ಹಳೆಯ ಜಾಗಕ್ಕೆ ಹಿಂತಿರುಗುವರು ಎನ್ನುತ್ತಾರವರು.


ಶ್ರೀನಗರದ ಹಬ್ಬಾಕದಲ್ ಪ್ರದೇಶದಲ್ಲಿ ವಾಸಿಸುವ 50ರ ಪ್ರಾಯದ ರತನ್ ಚಕು, ನಾನು 30 ವರ್ಷಗಳ ಹಿಂದೆ ಕಾಶ್ಮೀರ ಬಿಡದ್ದಕ್ಕೆ ಇಲ್ಲಿಂದ ಹೋಗಿರುವ ಸಂಬಂಧಿಕರು ಅಪಹಾಸ್ಯ ಮಾಡುತ್ತಾರೆ. ಫೋನಿನಲ್ಲಿ ಫಾನ್ಸಿ ಚುಯಿ ಬಿಹುನ್, ಆತಿ ಕ್ಯಾ ಚುಯ್ ಕರೂನ್ ಎಂದರೆ ಅಲ್ಲಿ ಸಾಯಲಿಕ್ಕೆ ಇದ್ದೀಯಾ, ಅಲ್ಲೇನು ಮಾಡುತ್ತಿದ್ದಿ ಎಂದು ಕೇಳುತ್ತಾರೆ ಎಂದರು.


“ನಾವು ಇಲ್ಲಿ ಬೆಂಬಲದ ಪದ್ಧತಿ ಹೊಂದಿಲ್ಲ. ನಾನು ನನ್ನ ಕಚೇರಿಗೆ ಹೋಗಲೂ ಹೆದರುವಂತಾಗಿದೆ. ನಮ್ಮನ್ನು ಸರಕಾರವಾಗಲಿ, ಯಾವುದೇ ಸಮುದಾಯಗಳವರಾಗಲಿ ಸಂಪರ್ಕಿಸಿಲ್ಲ. ಆದ್ದರಿಂದ ನಮ್ಮದು ಏನಿದ್ದರೂ ನಮ್ಮ ತಲೆಗೆ ನಮ್ಮ ಕೈ!”


ಭಾರೀ ಬಂಧನ ದಮನ ನೀತಿ
ಆ ಕೊಲೆಗಳ ಬಳಿಕ ಕಾಶ್ಮೀರದಲ್ಲಿ ಭಾರೀ ಪ್ರಮಾಣದ ದಮನ ನೀತಿ ಕಂಡುಬಂದಿದೆ. ಭದ್ರತಾ ಸಂಸ್ಥೆಗಳು ಹೊಸದಾಗಿ ದಾಳಿ, ಕೊಲೆ ಆಗದಿರಲಿ ಎಂದು 900ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.
ಈ ಬಂಧನಗಳ ಕಾಲದಲ್ಲಿ ಉಗ್ರರು ಮತ್ತು ರಕ್ಷಣಾ ಪಡೆಗಳ ನಡುವೆ ಸಾಕಷ್ಟು ಗುಂಡಿನ ಚಕಮಕಿಗಳು ನಡೆದಿವೆ. ಮಂಗಳವಾರ ಫೀರಿಪೋರ ಮತ್ತು ಶೋಪಿಯಾನ್ ನಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಯಿತು. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ 30 ಗಂಟೆಗಳಲ್ಲಿ ನಡೆದ 5ನೇ ಗುಂಡಿನ ಚಕಮಕಿ.


ಕಳೆದ ವಾರ ಶ್ರೀನಗರದ ನಾಟಿಪೋರ ಎಂಬಲ್ಲಿ ಒಬ್ಬ ಉಗ್ರನನ್ನುಗುಂಡಿಟ್ಟು ಕೊಲ್ಲಲಾಯಿತು. ಅದೇ ದಿನ ಶ್ರೀನಗರದ ಚನಾಪೋರ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೋಲೀಸು ಬೇಲಿಯನ್ನು ಹಾರಿ ಉಗ್ರರು ತಪ್ಪಿಸಿಕೊಂಡರು. ನಿನ್ನೆ ಅನಂತನಾಗ್ ನಲ್ಲಿ ಇನ್ನೊಂದು ಗುಂಡಿನ ಚಕಮಕಿ ನಡೆದು ಒಬ್ಬ ಉಗ್ರನು ಕೊಲ್ಲಲ್ಪಟ್ಟರೆ, ಓರ್ವ ಪೊಲೀಸ್ ಗಾಯಗೊಂಡನು.
ಮಂಗಳವಾರ ಬೆಳಿಗ್ಗೆ ಪೊಲೀಸರು ಶೋಪಿಯಾನ್ ನ ತುಲ್ರಾನ್ ನಲ್ಲಿ ಮೂವರು ಉಗ್ರರನ್ನು ಮುಗಿಸಿದ್ದಾಗಿ ಹೇಳಿದ್ದಾರೆ. ಕೊಲ್ಲಲ್ಪಟ್ಟವರಲ್ಲಿ ಮುಕ್ತಾರ್ ಶಾ ಒಬ್ಬನಾಗಿದ್ದು, ಕಳೆದ ವಾರ ಸ್ಥಳೀಯನಲ್ಲದ ಬೀದಿ ಮಾರಾಟಗಾರ ವೀರೇಂದರ್ ಪಾಸ್ವಾನ್ ನನ್ನು ಕೊಂದವನಾತ ಎಂದಿದ್ದಾರೆ ಪೊಲೀಸರು.


ಪಾಸ್ವಾನ್ ಮೇಲಿನ ದಾಳಿಯ ಜವಾಬ್ದಾರಿಯನ್ನು ಐಸಿಸ್ ಒಪ್ಪಿತ್ತು. ಆದರೆ ಟಿಆರ್ ಎಫ್- ದ ರೆಸಿಸ್ಟೆಂಟ್ ಫ್ರಂಟ್ ನ ಮುಕ್ತಾರ್ ಶಾ ಕೊಲೆಗಾರ ಎಂದು ಪೊಲೀಸರು ಹೇಳುತ್ತಿದ್ದಾರೆ.
ಇದರ ನಡುವೆ ಜಮ್ಮು ಮತ್ತು ಕಾಶ್ಮೀರದ ಆಡಳಿತವು ಪಂಡಿತರ ವಾಸದ ನೆಲೆಗಳ ಸುತ್ತ ಭದ್ರತೆಯನ್ನು ಬಲ ಪಡಿಸಿದೆ. ಕುಪ್ವಾರಾ ಜಿಲ್ಲಾಡಳಿತವು ಸೋಮವಾರ ಎಲ್ಲ ವಲಸೆ ಸಮುದಾಯಗಳವರ ವಾಸದ ಸುತ್ತ ಭದ್ರತಾ ವ್ಯವಸ್ಥೆಗಳನ್ನು ದುಪ್ಪಟ್ಟು ಮಾಡಿದೆ.]

Join Whatsapp