► ಹಣದ ಆಮಿಷಕ್ಕೆ ಬಲಿಯಾದ ಸೈನಿಕರು
ಅಮೃತಸರ: ಭಾರತೀಯ ಸೇನೆಯ ಗೌಪ್ಯ ಮಾಹಿತಿಯನ್ನು ರವಾನಿಸುತ್ತಿದ್ದ ಇಬ್ಬರು ಸೇನಾ ಸಿಬ್ಬಂದಿಯನ್ನು ಪಂಜಾಬ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಇವರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐಎಸ್ ಐ’ಜತೆಗೆ ನಿರಂತರ ಸಂಪರ್ಕದಲ್ಲಿದ್ದರು, ಅಮೃತಸರ ಮೂಲದ ಸಿಪಾಯಿ ಹರ್ ಪ್ರೀತ್ ಸಿಂಗ್ (23) ಮತ್ತು ತರನ್ ತಾರನ್ ಮೂಲದ ಸಿಪಾಯಿ ಗುರ್ ಭೇಜ್ ಸಿಂಗ್ (23) ಬಂಧಿತರು. ಹಣದ ಆಮಿಷಕ್ಕೆ ಬಲಿಯಾಗಿ, 2021ರ ಫೆಬ್ರವರಿಯಿಂದ ಮೇ ವರೆಗೆ 900 ಮಹತ್ವದ ದಾಖಲೆಗಳ ಫೋಟೋಗಳನ್ನು ಬಂಧಿತರು ಪಾಕ್ ಗೆ ರಾವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಮಾದಕ ವಸ್ತುಗಳ ಕಳ್ಳಸಾಗಣೆದಾರ ರಣವೀರ್ ಸಿಂಗ್ ಎಂಬಾತನನ್ನು ಕಳೆದ ಮೇ ನಲ್ಲಿ 70. ಗ್ರಾಂ. ಹೆರಾಯಿನ್ ಸಮೇತ ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ ಗಡಿಯಲ್ಲಿ ಭಾರತೀಯ ಸೇನೆಯ ನಿಯೋಜನೆಗೆ ಸಂಬಂಧಿ ಕೆಲವು ದಾಖಲೆಗಳು ಸಿಕ್ಕಿದ್ದವು. ಈ ಬಗ್ಗೆ ತೀವ್ರ ವಿಚಾರಣೆ ನಡೆಸಿದಾಗ ಸೇನಾ ಸಿಬ್ಬಂದಿಯ ಐಎಸ್ ಐ ನಂಟು ಬಯಲಾಗಿದೆ. ಸಿಪಾಯಿ ಹರ್ ಪ್ರೀತ್ ಸಿಂಗ್ ಹಾಗೂ ಬಂಧಿತ ಸ್ಮಗ್ಲರ್ ರಣವೀರ್ ಒಂದೇ ಗ್ರಾಮದವರು ಮತ್ತು ಆತ್ಮೀಯ ಸ್ನೇಹಿತರು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೋಲಿಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.