Home ಟಾಪ್ ಸುದ್ದಿಗಳು ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 1.5 ಕೋಟಿ ವಂಚನೆ: ಇಬ್ಬರ ಬಂಧನ

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ 1.5 ಕೋಟಿ ವಂಚನೆ: ಇಬ್ಬರ ಬಂಧನ

ಬೆಂಗಳೂರು: ಐಪಿಎಸ್ ಅಧಿಕಾರಿಗಳು, ಶಾಸಕರು, ಸಂಸದರ ಪರಿಚಯವಿರುವುದಾಗಿ ಹೇಳಿ ಸರ್ಕಾರಿ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿ ಒಂದೂವರೆ ಕೋಟಿ ರೂಪಾಯಿ ವಂಚನೆ ನಡೆಸಿದ ಇಬ್ಬರು ಆರೋಪಿಗಳನ್ನು ಚಿಕ್ಕಜಾಲ ಪೊಲೀಸರು ಬಂಧಿಸಿದ್ದಾರೆ.

ಕುಣಿಗಲ್ ತಾಲೂಕಿನ ಪ್ರಕಾಶ್(35) ಮತ್ತು ಹೊಸಕೋಟೆಯ ನಾರಾಯಣಪ್ಪ (45) ಬಂಧಿತ ಆರೋಪಿಗಳಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪಾಟೀಲ್ ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ಅವರು ತಿಳಿಸಿದ್ದಾರೆ.

ಆರೋಪಿಗಳು ಒಂದೇ ಗ್ರಾಮದ ಪ್ರಿಯಾಂಕ, ಪಶುಪತಿ, ಅಭಿಷೇಕ್, ಧನುಷ್ ಕುಮಾರ್, ಸಂದೀಪ್, ಹೇಮಂತ್, ಮನೋಜ್ ಕುಮಾರ್, ಗುತ್ತಿಗೆದಾರ ಮುನಿರಾಜು ಎಂಬವರಿಗೆ ವಂಚಿಸಿದ್ದಾರೆ.

ಆರೋಪಿಗಳ ವಿರುದ್ಧ ಮುನಿರಾಜು ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪದವೀಧರ ಯುವಕರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿರುವುದು ತನಿಖೆಯಿಂದ ಗೊತ್ತಾಗಿದೆ.

ಆರೋಪಿಗಳಾದ ನಾರಾಯಣಪ್ಪ ಮತ್ತು ಪ್ರಕಾಶ್ ಕೂಡ ಗುತ್ತಿಗೆದಾರರಾಗಿದ್ದಾರೆ. ಪಾಟೀಲ್ ವಿಧಾನಸೌಧದಲ್ಲಿ ಉದ್ಯೋಗದಲ್ಲಿದ್ದಾನೆ. ದೂರುದಾರರ ಪೈಕಿ ಮುನಿರಾಜು ಕೂಡ ಗುತ್ತಿಗೆದಾರನಾಗಿದ್ದು, ನಾರಾಯಣಪ್ಪ ಮತ್ತು ಪ್ರಕಾಶ್ ಪರಿಚಯವಾಗಿದೆ. ಈ ವೇಳೆ ಆರೋಪಿಗಳ ಪೈಕಿ ಪ್ರಕಾಶ್, ಬೆಳಗಾವಿ ಪೊಲೀಸ್ ಆಯುಕ್ತ ಬೋರಲಿಂಗಯ್ಯ ತನ್ನ ಚಿಕ್ಕಪ್ಪನಾಗಿದ್ದು, ಕುಣಿಗಲ್ ಕ್ಷೇತ್ರದ ಶಾಸಕ ರಂಗನಾಥ್, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಪರಿಚಯವಿದ್ದಾರೆ ಎಂದು ಹೇಳಿದ್ದಾನೆ. ತನ್ನ ತಂದೆ ಚಿಕ್ಕನರಸಿಂಹಯ್ಯ ಜಲಮಂಡಳಿಯಲ್ಲಿ ಎಇಇ ಆಗಿದ್ದಾರೆ. ಪೊಲೀಸ್ ಮತ್ತು ಜಲಮಂಡಳಿಯ ಎಲ್ಲ ಹಂತದ ಅಧಿಕಾರಿಗಳು ಗೊತ್ತು. ಈ ಎರಡು ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ. ಮುನಿರಾಜು ಪುತ್ರ ಪಶುಪತಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವೆ ಎಂದು 15 ಲಕ್ಷ ರೂ. ಪಡೆದು ವಂಚಿಸಿದ್ದಾನೆ ಎಂದು ತಿಳಿದುಬಂದಿದೆ.

1.53 ಕೋಟಿ ವಂಚನೆ:

ಪ್ರಿಯಾಂಕಗೆ ಜಲಮಂಡಳಿಯಲ್ಲಿ ಎಒಆರ್ ಉದ್ಯೋಗ ಕೊಡಿಸುತ್ತೇನೆ ಎಂದು 48 ಲಕ್ಷ ರೂ., ಅಭಿಷೇಕ್‌ ಗೆ ಸೂಪರಿಂಟೆಂಡೆಂಟ್ ಎಂಜಿನಿಯರ್‌ ಗಾಗಿ 52 ಲಕ್ಷ ರೂ., ಸಂದೀಪ್‌ ಗೆ ಜೂನಿಯರ್ ಅಕೌಂಟೆಂಟ್‌ ಗಾಗಿ 12 ಲಕ್ಷ ರೂ., ಮನೋಜ್ ಕುಮಾರ್‌ ಗೆ ಆಡಿಟರ್ ಉದ್ಯೋಗಕ್ಕಾಗಿ 12 ಲಕ್ಷ ರೂ.ಹೇಮಂತ್‌ ಗೆ ಮೀಟರ್ ರೀಡರ್ ಕೆಲಸ ಕೊಡಿಸಲು 12 ಲಕ್ಷ ರೂ., ಧನುಷ್ ಕುಮಾರ್‌ ಗೆ ಚಾಲಕ ಹುದ್ದೆಗೆ 3 ಲಕ್ಷ ರೂ. ಹೀಗೆ ಎಂಟು ಮಂದಿಗೆ ಕೆಲಸ ಕೊಡಿಸುತ್ತೇನೆ ಎಂದು 1.53 ಕೋಟಿ ರೂ. ಪಡೆದು ವಂಚಿಸಿದ್ದಾರೆ.

Join Whatsapp
Exit mobile version