ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರು ಜಖಂ: ಏರ್ ಬ್ಯಾಗ್ ನಿಂದ ಇಬ್ಬರು ಪಾರು

Prasthutha|

ಬೆಂಗಳೂರು: ವೇಗವಾಗಿ ಬರುತ್ತಿದ್ದ ಇನ್ನೋವಾ ಕ್ರಿಸ್ಟಾ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಚಾಲಕ ಸೇರಿ ಇಬ್ಬರು ಏರ್ ಬ್ಯಾಗ್ ನಿಂದ ಪಾರಾಗಿರುವ ಘಟನೆ ಮಲ್ಲೇಶ್ವರಂನ ನಿನ್ನೆ ಮಧ್ಯರಾತ್ರಿ ಮಂತ್ರಿ ಮಾಲ್ ಬಳಿ ನಡೆದಿದೆ.

- Advertisement -


ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಅತಿವೇಗವಾಗಿ ಬಂದ ಚಾಲಕ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದು ರಭಸಕ್ಕೆ ಕಾರ್ ನಲ್ಲಿದ್ದ ಎರಡು ಏರ್ ಬ್ಯಾಗ್ಗಳು ತೆರೆದುಕೊಂಡಿವೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಸೇರಿ ಕಾರಿನಲ್ಲಿದ್ದ ಇಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.


ಗಾಯಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ವೇಳೆ ಕಾರಿನಲ್ಲಿ ಮದ್ಯ ಬಾಟಲಿ ಪತ್ತೆಯಾಗಿದ್ದು, ಮದ್ಯ ಸೇವಿಸಿ ಕಾರು ಚಾಲನೆ ಮಾಡಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

- Advertisement -


ಇಬ್ಬರನ್ನೂ ಪೊಲೀಸರು ವೈದ್ಯಕೀಯ ಪರೀಕ್ಷೆ ಒಳಪಡಿಸಿದಾಗ ಮದ್ಯ ಸೇವನೆ ಮಾಡಿರುವುದು ಕಂಡು ಬಂದರೆ ಪಾನಮತ್ತ ಚಾಲನೆ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp
Exit mobile version