ಮಧುರೈ: ವೈಗೈ ನದಿ ಉತ್ಸವದ ವೇಳೆ ಉಂಟಾದ ಕಾಲ್ತುಳಿತಕ್ಕೆ ಓರ್ವ ಮಹಿಳೆ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧುರೈನ ಭಗವಾನ್ ಕಲ್ಹಝಗರ್ ಎಂಬಲ್ಲಿ ದುರ್ಘಟನೆ ನಡೆದಿದೆ. ಇಲ್ಲಿನ ವೈಗೈ ನದಿಯಲ್ಲಿ ವರ್ಷಂಪ್ರತಿ ಉತ್ಸವ ನಡೆಯುತ್ತೆ. ಆದರೆ ಕೋವಿಡ್ – 19 ನಿಷೇಧದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಉತ್ಸವ ನಡೆದಿರಲಿಲ್ಲ. ಎರಡು ವರ್ಷಗಳ ಬಳಿಕ ಉತ್ಸವ ವೀಕ್ಷಿಸಲು ಅಪಾರ ಜನಸ್ತೋಮ ನೆರೆದಿತ್ತು.
ಜನರು ಉತ್ಸವ ವೀಕ್ಷಿಸಿ ಹಿಂದಿರುಗುತ್ತಿದ್ದಾಗ ನದಿಯ ಪ್ರವೇಶ ಜಾಗವಾದ ಭಗವಾನ್ ಕಲ್ಹಝಗರ್ ಎಂಬಲ್ಲಿ ಕಾಲ್ತುಳಿತ ಉಂಟಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. , ಸಾಮಾನ್ಯ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.