Home ಟಾಪ್ ಸುದ್ದಿಗಳು ಸಿದ್ದರಾಮಯ್ಯ, ಕೊಹ್ಲಿ, ಶಾರುಖ್ ಸೇರಿ ಹಲವು ಗಣ್ಯರ ಬ್ಲೂಟಿಕ್ ತೆಗೆದುಹಾಕಿದ ಟ್ವಿಟರ್

ಸಿದ್ದರಾಮಯ್ಯ, ಕೊಹ್ಲಿ, ಶಾರುಖ್ ಸೇರಿ ಹಲವು ಗಣ್ಯರ ಬ್ಲೂಟಿಕ್ ತೆಗೆದುಹಾಕಿದ ಟ್ವಿಟರ್

ನವದೆಹಲಿ: ಬ್ಲೂಟಿಕ್ ಸೇವೆಯನ್ನು ಪಡೆಯಲು ಶುಲ್ಕ ಪಾವತಿಸದ ಕಾರಣ ಹಲವು ಗಣ್ಯರ ಖಾತೆಗಳಿಂದ ಬ್ಲೂಟಿಕ್ ಅನ್ನು ಟ್ವಿಟರ್ ತೆಗೆದು ಹಾಕಿದೆ.


ಚಿತ್ರತಾರೆಯರು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳು ಮತ್ತು ಪತ್ರಕರ್ತರ ಹೀಗೆ ಖ್ಯಾತನಾಮರ ಅಧಿಕೃತ ಟ್ವಿಟರ್ ಖಾತೆಗಳಿಂದ ‘ಬ್ಲೂ ಟಿಕ್’ ಗುರುತನ್ನು ತೆಗೆದುಹಾಕುವ ಕಾರ್ಯವನ್ನು ಟ್ವಿಟರ್ ಗುರುವಾರದಿಂದ ಆರಂಭಿಸಿದೆ. ಹೀಗಾಗಿ ಭಾರತದ ಹಲವು ಸೆಲೆಬ್ರಿಟಿಗಳು ತಮ್ಮ ಟ್ವಿಟರ್ ಖಾತೆಯಲ್ಲಿದ್ದ ‘ಬ್ಲೂ ಟಿಕ್’ ಗುರುತನ್ನು ಕಳೆದುಕೊಂಡಿದ್ದಾರೆ.


ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಇನ್ನೂ ಹಲವು ರಾಜಕೀಯ ನಾಯಕರ, ಸಿನಿಮಾ ತಾರೆಯರಾದ ಶಾರುಖ್ ಖಾನ್, ಅಮಿತಾಭ್ ಬಚ್ಚನ್, ಅಲಿಯಾ ಭಟ್, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಇನ್ನೂ ಹಲವು ಗಣ್ಯರು ಟ್ವಿಟರ್ ಬ್ಲೂಟಿಕ್ ಅನ್ನು ಕಳೆದುಕೊಂಡಿದ್ದಾರೆ.
ಬ್ಲೂಟಿಕ್ ಹೊಂದಿರುವ ಖಾತೆದಾರರು ತಮ್ಮ ‘ವೆರಿಫೈಡ್’ ಸ್ಥಾನಮಾನ ಉಳಿಸಿಕೊಳ್ಳಬೇಕಿದ್ದರೆ ತಿಂಗಳಿಗೆ 8 ಡಾಲರ್ (₹657.24) ನೀಡಬೇಕಾಗುತ್ತದೆ ಎಂದು ಮಸ್ಕ್ ಹೇಳಿದ್ದರು. ಇಲ್ಲವಾದರೆ ಬ್ಲೂಟಿಕ್ ಗುರುತುಗಳನ್ನು ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದ್ದರು.


ಖಾತೆದಾರರು ಬ್ಲೂ ಟಿಕ್ ಉಳಿಸಿಕೊಳ್ಳಬೇಕಾದರೆ ಮಾಸಿಕ 20 ಡಾಲರ್ ಶುಲ್ಕ ಪಾವತಿಸಬೇಕು ಎಂದು ಮಸ್ಕ್ ಆರಂಭದಲ್ಲಿ ಹೇಳಿದ್ದರಾದರೂ, ತೀವ್ರ ವಿರೋಧಗಳ ಹಿನ್ನೆಲೆಯಲ್ಲಿ ಶುಲ್ಕ ತಗ್ಗಿಸಿದ್ದರು. ಪಾವತಿ ಮಾಡದವರ ‘ಬ್ಲೂ ಟಿಕ್’ಗಳನ್ನು ಏಪ್ರಿಲ್ ಆರಂಭದಿಂದಲೇ ತೆಗೆಯಲಾಗುವುದು ಎಂದು ಮಸ್ಕ್ ಹೇಳಿದ್ದರು. ಅದರಂತೆ ಕೆಲವರ ‘ಬ್ಲೂ ಟಿಕ್’ಗಳು ಕಣ್ಮರೆಗೊಂಡಿದ್ದವು. ಆದರೆ, ಗುರುವಾರ ಈ ಪ್ರಕ್ರಿಯೆ ಸಾಮೂಹಿಕವಾಗಿ ನಡೆದಿದೆ.

Join Whatsapp
Exit mobile version