ಬೆಂಗಳೂರು: ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಹಾಗೂ ಕುಮ್ಮಕ್ಕು ನೀಡುವ ಕಾರಾಗೃಹ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತಿನ ಕ್ರಮ ಜರುಗಿಸುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಸಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಸಚಿವರು, ಇತ್ತೀಚೆಗೆ ರಾಮನಗರ, ತುಮಕೂರು, ಕಲಬುರಗಿ ಹಾಗೂ ಬೆಳಗಾವಿ ಕಾರಾಗೃಹಗಳಲ್ಲಿ ಕೆಲವು ಅಕ್ರಮ ಚಟುವಟಿಕೆಗಳ ಬಗ್ಗೆ ವರದಿಯಾಗಿದ್ದು, ಇದರ ಬಗ್ಗೆ ವಿಸ್ತೃತ ತನಿಖೆಗೆ ಆದೇಶ ನೀಡಿದ್ದು, ತುಮಕೂರು ಜಿಲ್ಲಾ ಕಾರಾಗೃಹದ ವಾರ್ಡನ್ ಪ್ರವೀಣ್ ಎಂಬುವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಹೇಳಿದರು.
ಹಾಸನ ಜಿಲ್ಲಾ ಕಾರಾಗೃಹದ ಮೇಲೆ ನಿನ್ನೆ ಜಿಲ್ಲಾ ಪೊಲೀಸ್ ಸಿಬ್ಬಂದಿ, ದಿಢೀರ್ ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿ ಇಟ್ಟುಕೊಳ್ಳಲಾಗಿದ್ದ ಮೊಬೈಲ್ ಸೆಟ್ ಗಳನ್ನು ಸೀಜ್ ಮಾಡಿದ್ದಾರೆ. ಮೊಬೈಲ್’ಗಳನ್ನು ಜೈಲಿನೊಳಗೆ ಸಾಗಿಸಲು ಸಹಕರಿಸಿದ ಸಿಬ್ಬಂದಿ ಹಾಗೂ ಅದನ್ನು ಜೈಲಿನೊಳಗೆ ಉಪಯೋಗಿಸಿದ ಜೈಲು ಬಂದಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಬೆಳಗಾವಿ ಕೇಂದ್ರ ಕಾರಾಗೃಹದಿಂದ ಇತ್ತೀಚೆಗೆ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ ಮಾಡಿದ ಕೈದಿಯ ವಿರುದ್ಧವೂ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದೂ ಸಚಿವರು ಹೇಳಿದರು.
ರಾಜ್ಯದ ಕಾರಾಗೃಹಗಳಲ್ಲಿ ಅಕ್ರಮವಾಗಿ ಮೊಬೈಲ್ ಉಪಯೋಗಿಸುವುದನ್ನು ಪ್ರತಿಬಂಧಿಸಲು ಅತ್ಯಾಧುನಿಕ ಮೊಬೈಲ್ ಜಾಮರ್ ಗಳನ್ನು ಅಳವಡಿಸಲಾಗುತ್ತಿದೆ ಎಂದೂ ಸಚಿವರು ತಿಳಿಸಿದರು.