ತುಮಕೂರು: ಮಧುಗಿರಿ ತಾಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ನಡೆದ ಜಾತ್ರೆಯಲ್ಲಿ ಊಟ ಸೇವಿಸಿ ಮೂವರು ಮಹಿಳೆಯರು ಮೃತಪಟ್ಟು, ಹಲವರು ಅಸ್ವಸ್ಥಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಮೃತರನ್ನು ಬುಳ್ಳಸಂದ್ರದ ನಿವಾಸಿಗಳಾದ ತಿಮ್ಮಕ್ಕ (80) ಮತ್ತು ಗಿರಿಯಮ್ಮ (86) ಮತ್ತು ಆಂಧ್ರಪ್ರದೇಶದ ಮಡಕಶಿರಾ ತಾಲ್ಲೂಕಿನ ಸಿದ್ಧಗಿರಿ ಗ್ರಾಮದ ಕಾಟಮ್ಮ (45) ಎಂದು ಗುರುತಿಸಲಾಗಿದೆ.
ಕರಿಯಮ್ಮ ಮತ್ತು ಮುತ್ತುರಾಯ ಭೂತಪ್ಪ ದೇವರ ವಾರ್ಷಿಕ ಜಾತ್ರೆ ಶನಿವಾರ ಆರಂಭವಾಯಿತು. ಭಾನುವಾರ ಮಾಂಸಾಹಾರಿ ಆಹಾರವನ್ನು ಸೇವಿಸಿದ ನಂತರ, ಹಲವರಲ್ಲಿ ವಾಂತಿ ಮತ್ತು ಭೇದಿ ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಜನರು ತಮ್ಮ ತಮ್ಮ ಮನೆಗಳಲ್ಲಿಯೇ ಆಹಾರ ಸಿದ್ಧಪಡಿಸಿ, ಜಾತ್ರೆಗೆ ತಂದಿದ್ದರು. ಮೂರು ಕುಟುಂಬಗಳು ತಯಾರಿಸಿದ ಆಹಾರ ಸೇವಿಸಿದವರಲ್ಲಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸಹಾಯಕ ಆಯುಕ್ತ ಗೋಟೂರು ಶಿವಣ್ಣ ಹೇಳಿದ್ದಾರೆ.