Home ಟಾಪ್ ಸುದ್ದಿಗಳು ಸದನದಲ್ಲಿ ತುಳು ವೈಭವ : ಸ್ಪೀಕರ್ ಯು.ಟಿ.ಖಾದರ್‌ಗೆ ತುಳು ಅಕಾಡೆಮಿಯಿಂದ ಸನ್ಮಾನ

ಸದನದಲ್ಲಿ ತುಳು ವೈಭವ : ಸ್ಪೀಕರ್ ಯು.ಟಿ.ಖಾದರ್‌ಗೆ ತುಳು ಅಕಾಡೆಮಿಯಿಂದ ಸನ್ಮಾನ

ಮಂಗಳೂರು : ಕರ್ನಾಟಕ ವಿಧಾನಸಭೆಯಲ್ಲಿ ಕಲಾಪದ ವೇಳೆ ಶಾಸಕರಿಗೆ ತುಳು ಭಾಷೆಯನ್ನು ಮಾತನಾಡಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಮಂಗಳೂರಲ್ಲಿ ಸನ್ಮಾನಿಸಿದರು.


ಖಾದರ್ ಅವರಿಗೆ ಸಾಲು ಹಾಗೂ ಪುಸ್ತಕ ಮತ್ತು ಸ್ಮರಣಿಕೆ ನೀಡಿ, ಅಭಿನಂದಿಸಿದರು. ಈ ವೇಳೆ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ರೋಹಿತ್ ಉಳ್ಳಾಲ್, ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು.

ಯು.ಟಿ ಖಾದರ್‌ ಸ್ಪೀಕರ್‌ ಆದ ಬಳಿಕ ವಿಧಾನಸಭೆ ಕಲಾಪದಲ್ಲಿ ತುಳು ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿದೆ. ಕಲಾಪದಲ್ಲಿ ಕರಾವಳಿ ಜಿಲ್ಲೆಯ ಶಾಸಕರು ತುಳು ಮಾತನಾಡಲು ಅವಕಾಶ ಸಿಕ್ಕಿದೆ. ಖುದ್ದು ಸ್ಪೀಕರ್‌ ಕೂಡ ಶಾಸಕರ ಜೊತೆ ತುಳುವಿನಲ್ಲೇ ಮಾತನಾಡಿದ್ದಾರೆ. ಸ್ಪೀಕರ್‌ ಅವರು ಕರಾವಳಿಯ ಶಾಸಕರಾದ ಅಶೋಕ್‌ ರೈ, ವೇದವ್ಯಾಸ್‌ ಕಾಮತ್‌, ಸುನಿಲ್‌ ಕುಮಾರ್‌ ಜೊತೆ ತುಳುವಿನಲ್ಲಿ ಮಾತನಾಡಿರುವ ವೀಡಿಯೋ ವೈರಲ್‌ ಆಗಿತ್ತು.

ಇತ್ತೀಚೆಗೆ ತುಳು ಭಾಷೆಯಲ್ಲಿ ಮಾತನಾಡುವ ವೇಳೆ ಕೆಲ ಶಾಸಕರು ಆಕ್ಷೇಪ ಎತ್ತಿದ್ದಕ್ಕೆ ತಿರುಗೇಟು ನೀಡಿದ್ದ ಸ್ಪೀಕರ್‌ ಅವರು ʻತುಳು ಭಾಷೆಯ ಸೌಂದರ್ಯ, ಇತಿಹಾಸ, ಸಂಸ್ಕೃತಿಯನ್ನು ಅರಿತುಕೊಂಡರೇ ಎಲ್ಲರೂ ತುಳು ಭಾಷೆ ಕಲಿಯುತ್ತಾರೆʼ ಎಂದಿದ್ದರು.

ಅಲ್ಲದೇ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ನೀಡುವ ಬಗ್ಗೆಯೂ ವಿಧಾನಸಭೆ ಕಲಾಪದಲ್ಲಿ ಸತತವಾಗಿ ಆಗ್ರಹಗಳು ಕೇಳಿಬಂದಿದೆ. ಹೀಗೆ ವಿಧಾನಮಂಡಲದ ಅಧಿವೇಶದನಲ್ಲಿ ತುಳು ಭಾಷೆಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿರುವ ಕಾರಣಕ್ಕೆ ತುಳು ಸಾಹಿತ್ಯ ಅಕಾಡೆಮಿ ಸ್ಪೀಕರ್‌ ಅವರನ್ನು ಸನ್ಮಾನಿಸಿದೆ.

Join Whatsapp
Exit mobile version