ಬೆಂಗಳೂರು: ಕೋವಿಡ್ ನಿಂದ ಗುಣಮುಖರಾದವರ ಪೈಕಿ ಹಲವರಲ್ಲಿ ಕ್ಷಯ ರೋಗ ಪತ್ತೆಯಾಗಿದೆ. ಈ ಕುರಿತು ವಿಸ್ತೃತವಾದ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸೂಚಿಸಲಾಗಿದ್ದು, ರಾಜ್ಯವನ್ನು ಕ್ಷಯ ಮುಕ್ತ ಮಾಡುವ ಗುರಿಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಸೌಧದಲ್ಲಿ ನಡೆದ, ‘ವಿಶ್ವ ಕ್ಷಯರೋಗ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋವಿಡ್ ನಿಂದ ಗುಣಮುಖರಾದವರಿಗೆ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದಲೇ ಕ್ಷಯ ಪರೀಕ್ಷೆ ಮಾಡಲಾಗಿದ್ದು, ಪರೀಕ್ಷೆಗೊಳಪಟ್ಟ 25 ಲಕ್ಷ ಜನರಲ್ಲಿ 144 ಜನರಿಗೆ ಕ್ಷಯ ದೃಢಪಟ್ಟಿದೆ. ಕೋವಿಡ್ ಗೆ ತುತ್ತಾದ ಬಳಿಕವೇ ಇವರಿಗೆ ಕ್ಷಯ ಬಂದಿದೆ ಎಂದು ಅವರು ಹೇಳಿದರು.
ಕೋವಿಡ್ ನಂತೆಯೇ ಕ್ಷಯವೂ ಸಾಂಕ್ರಾಮಿಕ ರೋಗವಾಗಿದ್ದು, ಕೋವಿಡ್ ವೈರಸ್ ನಿಂದ ಬಂದರೆ, ಕ್ಷಯವು ಬ್ಯಾಕ್ಟೀರಿಯಾದಿಂದ ಬರುತ್ತದೆ. 2030 ರ ವೇಳೆಗೆ ಜಗತ್ತನ್ನು ಕ್ಷಯ ಮುಕ್ತ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 2025 ರೊಳಗೆ ಭಾರತವನ್ನು ಕ್ಷಯ ಮುಕ್ತ ಮಾಡಬೇಕು ಎಂಬ ಗುರಿ ಹೊಂದಿದೆ. ರಾಜ್ಯ ಸರ್ಕಾರ ರೋಗಗಳ ಬಗ್ಗೆ ಅರಿವು ಮೂಡಿಸಲು ವರ್ಷಕ್ಕೆ 5 ಕೋಟಿ ರೂ.ಗೂ ಅಧಿಕ ಹಣ ಖರ್ಚು ಮಾಡುತ್ತಿದೆ. ಆದ್ದರಿಂದ ಇದಕ್ಕೆ ಸಾಮೂಹಿಕ ಸಹಕಾರ ಅಗತ್ಯ ಎಂದು ಹೇಳಿದರು.
ಕೋವಿಡ್ ಬಂದ ಬಳಿಕ ನಿಮ್ಹಾನ್ಸ್ ಸಂಸ್ಥೆಯು 25 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ನಡೆಸಿದೆ. ಇದೇ ರೀತಿ, ಕ್ಷಯದ ಚಿಕಿತ್ಸೆಯ ಜೊತೆಗೆ ರೋಗಿಗೆ ಹಾಗೂ ಕುಟುಂಬದವರಿಗೆ ಆಪ್ತ ಸಮಾಲೋಚನೆ ಮಾಡಬೇಕಿದೆ. ಕ್ಷಯ ಕಂಡುಬಂದ ಬಳಿಕ ಆ ಸೋಂಕು ರೋಗಿಯ ಮನೆಯವರಿಗೆ ಹರಡದಂತೆ ಎಚ್ಚರ ವಹಿಸಲು ಮಾರ್ಗದರ್ಶನ ನೀಡಬೇಕು ಎಂದರು.