Home ರಾಜ್ಯ ರಂಗಶಿಕ್ಷಣವೂ ಅಂಕಗಳಿಕೆಯ ಪದ್ದತಿಗೆ ಒಳಪಟ್ಟಾಗಲೇ ಅದರ ಪ್ರಾಮುಖ್ಯತೆ ಹೆಚ್ಚಾಗಲು ಸಾಧ್ಯ: ಟಿ ಎಸ್‌ ನಾಗಾಭರಣ

ರಂಗಶಿಕ್ಷಣವೂ ಅಂಕಗಳಿಕೆಯ ಪದ್ದತಿಗೆ ಒಳಪಟ್ಟಾಗಲೇ ಅದರ ಪ್ರಾಮುಖ್ಯತೆ ಹೆಚ್ಚಾಗಲು ಸಾಧ್ಯ: ಟಿ ಎಸ್‌ ನಾಗಾಭರಣ

ಪದವಿ ತರಗತಿಗಳಲ್ಲಿ ರಂಗಶಿಕ್ಷಣದ ಮಹತ್ವದ ಬಗೆಗಿನ ಎಫ್‌ಡಿಪಿ ಕಾರ್ಯಕ್ರಮದ ಉದ್ಘಾಟನೆ

ಬೆಂಗಳೂರು : ಪದವಿ ತರಗತಿಗಳಲ್ಲಿ ರಂಗಶಿಕ್ಷಣದ ಶೈಕ್ಷಣಿಕ ಮಹತ್ವ ಬಹಳ ಹೆಚ್ಚಾಗಿದೆ. ಆದರೆ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕಾದರೆ ಅದನ್ನು ಅಂಕಗಳಿಕೆಯ ಪದ್ದತಿಗೆ ಅಳವಡಿಸುವುದು ಅಗತ್ಯ ಎಂದು ಹಿರಿಯ ರಂಗಕರ್ಮಿ ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್‌ ನಾಗಾಭರಣ ಅಭಿಪ್ರಾಯಪಟ್ಟರು.

ಇಂದು ವೆಬಿನಾರ್‌ ಮೂಲಕ ಕಾಲೇಜು ಶಿಕ್ಷಣ ಇಲಾಖೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ, ಸುರಾನಾ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಾಗೂ ಎರಡೂ ಕಾಲೇಜುಗಳ ಐ.ಕ್ಯೂ.ಎ.ಸಿ ಸಮಿತಿಯ ಸಹಕಾರ ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಜ್ಞಾನಭಾರತಿ ಪ್ರದರ್ಶನ ಕಲಾ ವಿಭಾಗ ಇವರ ಸಹಯೋಗದಲ್ಲಿ ಆಯೋಜಿಸಲಾಗಿರುವ ಪದವಿ ತರಗತಿಗಳಲ್ಲಿ ರಂಗ ಶಿಕ್ಷಣದ ಮಹತ್ವ (ನಾಟಕ ಪಠ್ಯ – ಪ್ರದರ್ಶನ – ಭೋಧನೆ) ಏಳು ದಿನಗಳ ರಾಷ್ಟಮಟ್ಟದ ಎಫ್‌ಡಿಪಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪದವಿ ಶಿಕ್ಷಣದಲ್ಲಿ ಅನ್ವಯಿಕ ರಂಗಪ್ರಕಾರವನ್ನು ಅಳವಡಿಸಿಕೊಳ್ಳುವ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕಾಗಿದೆ. ಏಕೆಂದರೆ ರಂಗಶಿಕ್ಷಣವನ್ನು ನಾವು ಶಿಕ್ಷಣದ ಶಿಸ್ತಿಗೆ ಅಳವಡಿಸಿಕೊಳ್ಳಬೇಕಾದರೆ ಅದು ಅಗತ್ಯವಾಗಿದೆ. ಆದ್ಯತೆಯ ಶಿಕ್ಷಣ ಪದ್ದತಿಯಲ್ಲಿ ಬೌದ್ದಿಕ ಗ್ರಹಿಕೆಯ ಹೆಚ್ಚಾಗಲು ಇಂತಹ ವಿಷಯಗಳ ಪಠಣ ಅವಶ್ಯಕವಾಗಿದೆ. ರಂಗಭೂಮಿ ಎಂದರೆ ಕೇವಲ ಚಳುವಳಿ ಎಂದಲ್ಲ. ಅದೊಂದು ಪ್ರಭೇದ ಅಷ್ಟೇ. ಆದರೆ, ಮನೋವಿಕಾಸ ಎನ್ನುವುದು ಮತ್ತು ಸಾಂಸ್ಕೃತಿಕ ವಲಯದ ಸೃಷ್ಟಿ ಬಹಳ ದೊಡ್ಡ ಕರ್ತವ್ಯವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಬರುವ ಹತ್ತು ಹಲವು ಯೋಜನೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಅಗತ್ಯವಿದೆ. ಅದರಲ್ಲಿ ಏಕರೂಪ ಪಠ್ಯಕ್ರಮ ಇಲ್ಲ. ಸೃಜನಾತ್ಮಕತೆ ಇದೆ, ಭಿನ್ನತೆ ಇದೆ ಅಲ್ಲದೆ ಹೊಸತನದ ಹಾದಿಯನ್ನು ಕಂಡುಕೊಳ್ಳಲು ಅವಕಾಶ ಇದೆ. ಭಾಷೆಯನ್ನು ಬೆಳೆಸುವ ಬಗ್ಗೆ, ಭಾಷೆಯ ನಿರಂತರತೆಯನ್ನು ಕಾಪಾಡುವಲ್ಲಿ, ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ರಂಗಶಿಕ್ಷಣ ಪ್ರಮುಖ ಪಾತ್ರವಹಿಸಲಿದೆ. ಅಲ್ಲದೆ, ಪದವಿ ತರಗತಿಗಳಲ್ಲಿ ರಂಗಶಿಕ್ಷಣದ ಶೈಕ್ಷಣಿಕ ಮಹತ್ವ ಬಹಳ ಹೆಚ್ಚಾಗಿದೆ. ಆದರೆ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕಾದರೆ ಅದನ್ನು ಅಂಕಗಳಿಕೆಯ ಪದ್ದತಿಗೆ ಅಳವಡಿಸುವುದು ಅಗತ್ಯ ಎನ್ನುವುದು ನಮ್ಮ ಒತ್ತಾಯವಾಗಿದೆ ಎಂದು ಹೇಳಿದರು.

ಕರ್ನಾಟಕ ನಾಟಕ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರಾದ ಜೆ. ಲೋಕೇಶ್‌ ಮಾತನಾಡಿ, ಪದವಿ ತರಗತಿಗಳಲ್ಲಿ ಯಾವ ರೀತಿಯ ನಾಟಕಗಳನ್ನು ಪಠ್ಯಪುಸ್ತಕಗಳನ್ನು ಅಳವಡಿಸಬೇಕು ಎನ್ನುವುದಕ್ಕೆ ಸಮಿತಿಗಳು ಹೆಚ್ಚಿನ ಒತ್ತು ನೀಡಬೇಕು. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಅನುವು ಮಾಡಿಕೊಡುವಂತಹ ರಂಗ ಚಟುವಟಿಕೆಗಳು ಪಠ್ಯದಲ್ಲಿ ಅಳವಡಿಕೆಯಾಗಬೇಕು. ಅಲ್ಲದೆ, ಆ ಚಟುವಟಿಕೆಗಳನ್ನು ಅಂಕಗಳಿಕೆಯ ಪರಿಧಿಯಲ್ಲಿ ತಂದಲ್ಲಿ ಜನರು ಅದರಲ್ಲಿ ತೊಡಗಿಕೊಳ್ಳುತ್ತಾರೆ ಎಂದು ಅಬಿಪ್ರಾಯಪಟ್ಟರು.

ಕಾರ್ಯಕ್ರಮದ ನಿರ್ವಹಣೆಯನ್ನು ಸಂಯೋಜಕರಾದ ಸುರಾನಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ವತ್ಸಲಾ ಮೋಹನ್‌ ನಡೆಸಿಕೊಟ್ಟರು. ಡಾ. ರಾಜಶೇಖರಯ್ಯ ಮಠಪತಿ, ಸಹಾಯಕ ಪ್ರಧ್ಯಾಪಕರು ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ, ಬೆಂ.ವಿ.ವಿ ಜ್ಞಾನಭಾರತಿ ಕಲಾವಿಭಾಗದ ನಿರ್ದೇಶಕ ಪ್ರದರ್ಶನ, ಡಾ ಹಂಸಿನಿ ನಾಗೇಂದ್ರ. ಸುರಾನಾ ಕಾಲೇಜು ಸೌತ್‌ ಎಂಡ್‌ ರಸ್ತೆ ಪ್ರಾಂಶುಪಾಲೆ ಡಾ ಭವಾನಿ ಎಂ ಆರ್‌, ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರದ ಪ್ರಾಂಶುಪಾಲರಾದ ಡಾ ಬಿ ಚಂದ್ರಶೇಖರ್‌, ಕಾರ್ಯಕ್ರಮ ಸಂಯೋಜಕರಲ್ಲೊಬ್ಬರಾದ ಡಾ. ಬಿ.ಆರ್‌. ರಘುನಂದನ್‌ (ಬೇಲೂರು ರಘುನಂದನ್) ವಂದನಾರ್ಪಣೆ ಮಾಡಿದರು. ರಾಜ್ಯ ಮತ್ತು ದೇಶಧ ವಿವಿಧ ಭಾಗಗಳ ಪ್ರಾಧ್ಯಾಪಕರುಗಳು,ರಂಗಾಸಕ್ತರು, ರಂಗನಟರು, ರಂಗಕರ್ಮಿಗಳು ಪಾಲ್ಗೊಂಡಿದ್ದರು.

Join Whatsapp
Exit mobile version