Home ಟಾಪ್ ಸುದ್ದಿಗಳು ಭಾನುವಾರದಿಂದ ರಾಜ್ಯಾದ್ಯಂತ ಕಲ್ಲು, ಎಂ-ಸ್ಯಾಂಡ್ ಸಾಗಾಣಿಕೆ ಬಂದ್: ಲಾರಿ ಮಾಲೀಕರ ಸಂಘದ ಬೆಂಬಲ

ಭಾನುವಾರದಿಂದ ರಾಜ್ಯಾದ್ಯಂತ ಕಲ್ಲು, ಎಂ-ಸ್ಯಾಂಡ್ ಸಾಗಾಣಿಕೆ ಬಂದ್: ಲಾರಿ ಮಾಲೀಕರ ಸಂಘದ ಬೆಂಬಲ

►ನೆರೆ ರಾಜ್ಯಗಳಿಂದಲೂ ಪೂರೈಕೆ ಸ್ಥಗಿತ

ಬೆಂಗಳೂರು: ಆಲ್ ಇಂಡಿಯಾ ಫೆಡರೇಷನ್ ಆಫ್ ಲಾರಿ ಓನರ್ಸ್ ಅಸೋಸಿಯೇಷನ್, ಆಲ್ ಇಂಡಿಯಾ ಮೋಟಾರ್ ವೆಹಿಕಲ್ ಕಾಂಗ್ರೆಸ್, ತಮಿಳುನಾಡು ಕ್ವಾರಿ ಅಸೋಸಿಯೇಷನ್ ಮತ್ತಿತರ ಸಂಘಟನೆಗಳ ಬೆಂಬಲದೊಂದಿಗೆ ನಾಳೆಯಿಂದ (ಭಾನುವಾರ) ರಾಜ್ಯಾದ್ಯಂತ ಕಟ್ಟಡ ಕಲ್ಲು, ಎಂ-ಸ್ಯಾಂಡ್ ಉತ್ಪಾದನೆ, ಸಾಗಾಣಿಕೆಯನ್ನು ಅನಿರ್ದಿಷ್ಟಾವಧಿವರೆಗೆ ಬಂದ್ ಮಾಡಲು ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಟೋನ್ ಕ್ರಷರ್ಸ್ ಅಸೋಸಿಯೇಷನ್ ನಿರ್ಧರಿಸಿದೆ.
ಸರ್ಕಾರದ ಧೋರಣೆ ಪ್ರತಿಭಟಿಸಿ ಶೇಷಾದ್ರಿಪುರಂನ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಮತ್ತು ಸ್ಫೋನ್ ಕ್ರಷರ್ಸ್ ಅಸೋಸಿಯೇಷನ್ ಕಚೇರಿ ಎದುರು ಸಂಘದ ಪದಾಧಿಕಾರಿಗಳು ತಲೆ ಮೇಲೆ ಕಟ್ಟಡ ಕಲ್ಲು, ಜಲ್ಲಿ, ಎಂ-ಸ್ಯಾಂಡ್ ಮೂಟೆ ಹೊತ್ತು ಪ್ರತಿಭಟನೆ ನಡೆಸಿದರು. ಬಳಿಕ ವಿವಿಧ ಸಂಘಟನೆಗಳ ಪ್ರಮುಖರೊಂದಿಗೆ ಸಭೆ ನಡೆಸಿ ಅನಿರ್ದಿಷ್ಟಾವಧಿ ಬಂದ್ ಮಾಡಲು ತೀರ್ಮಾನಿಸಿದರು.


ಗುತ್ತಿಗೆದಾರರಿಂದ ರಾಜಧನ ಸಂಗ್ರಹ ಸ್ಥಗಿತಗೊಳಿಸಬೇಕು. ಕೆ.ಎಂ.ಆರ್.ಸಿ.ಆರ್ – 1994ಕ್ಕೆ ಸಮರ್ಪಕ ತಿದ್ದುಪಡಿ ತರಬೇಕು. ಇದಕ್ಕೆ ತಿದ್ದುಪಡಿ ಆಗದೇ ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಕೇಂದ್ರದಿಂದ ವೇ ಬ್ರಿಡ್ಜ್, ಜಿಯೋ ಫೆನ್ಸಿಂಗ್ ಮುಂತಾದ ಕ್ರಮಗಳನ್ನು ಅಳವಡಿಸಿದರೆ ಉದ್ಯಮ ನಡೆಸುವುದು ಕಷ್ಟವಾಗುತ್ತದೆ ಎಂದು ಅಸೋಸಿಯೇಷನ್ ಪದಾಧಿಕಾರಿಗಳು ಎಚ್ಚರಿಕೆ ನೀಡಿದರು.


ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಶೆಟ್ಟಿ ಮಾತನಾಡಿ, ಕೊಡಲೇ ಮುಖ್ಯಮಂತ್ರಿ, ಗಣಿ ಮತ್ತು ಭೂವಿಜ್ಞಾನ ಹಾಗೂ ಸಂಬಂಧಿಸಿದ ಎಲ್ಲಾ ಸಚಿವರು ನಮ್ಮ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು. ಬೇಡಿಕೆ ಈಡೇರುವ ತನಕ ನಾವು ಬಂದ್ ಸ್ಥಗಿತಗೊಳಿಸುವುದಿಲ್ಲ. ಇದರಿಂದ ಜನ ಸಾಮಾನ್ಯರು ಮನೆ ನಿರ್ಮಿಸಲು ತೊಂದರೆ ಎದುರಾಗಲಿದೆ. ನಾಳೆಯಿಂದ ಸರ್ಕಾರದ ವಿವಿಧ ಮೂಲ ಸೌಕರ್ಯ ನಿರ್ಮಾಣ ಕಾಮಗಾರಿಯ ಮೇಲೆ ಬಂದ್ ನಿಂದ ತೀವ್ರ ಪ್ರತಿಕೂಲ ಪರಿಣಾಮ ಬೀರಲಿದೆ ಎಂದರು.
ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಮಾತನಾಡಿ, ಇದೇ 28 ರಂದು ಬೆಳಗಾವಿಯಲ್ಲಿ ಸರ್ಕಾರದ ಧೋರಣೆ ವಿರುದ್ಧ “ಬೃಹತ್ ಪ್ರತಿಭಟನೆ” ಮಾಡಲು ತೀರ್ಮಾನಿಸಿದ್ದು, 50 ಸಾವಿರಕ್ಕೂ ಹೆಚ್ಚು ಮಂದಿ ನಮ್ಮ ಹೋರಾಟಕ್ಕೆ ಕೈ ಜೋಡಿಸಲಿದ್ದಾರೆ. ಕ್ರಷರ್ ಮತ್ತು ಕ್ವಾರಿ ಘಟಕಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದೇವೆ’ ಎಂದು ತಿಳಿಸಿದರು.


ಅಸೋಸಿಯೇಷನ್ ಗೌರವಾಧ್ಯಕ್ಷ ಡಿ.ಸಿದ್ದರಾಜು ಮಾತನಾಡಿ, ಸರ್ಕಾರಕ್ಕೆ ಈಗಾಗಲೇ ರಾಜಧನ ಸಂದಾಯವಾಗಿರುವುದರಿಂದ ಮತ್ತೆ ಗಣಿ ಗುತ್ತಿಗೆದಾರರಿಂದ ವಸೂಲಿ ಮಾಡಲು ಹೊರಟಿರುವುದು ಸರಿಯಲ್ಲ. ಸರ್ಕಾರ ಕಳೆದ 40 ವರ್ಷಗಳಿಂದ ಕಾಮಗಾರಿ ನಿರ್ವಹಣಾ ಇಲಾಖೆಗಳಲ್ಲಿ ರಾಜಧನವನ್ನು ಪಡೆದುಕೊಳ್ಳುತ್ತಿದೆ. ಸರ್ಕಾರಕ್ಕೆ ರಾಜಧನ ದೊರೆಯುತ್ತಿರುವಾಗ ಮತ್ತೆ ಗಣಿಗುತ್ತಿಗೆದಾರರಿಂದ ವಸೂಲಿ ಮಾಡುವುದು ತರವಲ್ಲ ಎಂದು ತಿಳಿಸಿದರು.


ಉಪಾಧ್ಯಕ್ಷ ಕಿರಣ್ ರಾಜ್ ಬಿ. ಆರ್. ಮಾತನಾಡಿ, ಕಾನೂನುಬದ್ಧವಾಗಿ ಗಣಿಗಾರಿಕೆ ನಡೆಸುವುದಕ್ಕೆ ಪೂರಕವಾಗಿ ನಿಯಮಗಳಿಲ್ಲ. ಆದ್ದರಿಂದ ನಿಯಮಗಳ ಸಮಗ್ರ ತಿದ್ದುಪಡಿಯ ಅಗತ್ಯವಿದೆ. ದೂರ ಸಂವೇದಿ ತಂತ್ರಜ್ಞಾನದ ಮೂಲಕ ಡ್ರೋಣ್ ಸಮೀಕ್ಷೆ ನಡೆಸುವ ನಿಯಮಗಳಿಗೆ ತಿದ್ದುಪಡಿ ತಂದಿರುವುದು ಸೂಕ್ತವಾಗಿಲ್ಲ. ಇದರಿಂದ ಉದ್ಯಮ ನಡೆಸುವುದು ಅಸಾಧ್ಯವಾಗುತ್ತದೆ. ಮಾತ್ರವಲ್ಲದೇ ಅಭಿವೃದ್ಧಿ ಕೆಲಸಗಳಿಗೂ ಅಡಚಣೆಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

Join Whatsapp
Exit mobile version