ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್)ಯ ಗದ್ವಾಲ್ ಶಾಸಕ ಕೃಷ್ಣ ಮೋಹನ್ ರೆಡ್ಡಿ ಅವರು ಸರ್ಕಾರಿ ಶಾಲೆಯ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿ ಕಾಲರ್ ಹಿಡಿದಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಶಾಲೆಯ ಉದ್ಘಾಟನೆಗೆ ತಡವಾಗಿ ಆಹ್ವಾನಿಸಿದ್ದಕ್ಕೆ ಕೃಷ್ಣ ಮೋಹನ್ ರೆಡ್ಡಿ ಕೋಪಗೊಂಡಿದ್ದರು. ಅಲ್ಲದೆ, ಶಾಸಕರ ಅನುಪಸ್ಥಿತಿಯಲ್ಲಿ ನಿಗದಿತ ಸಮಯಕ್ಕೆ ಮುಂಚಿತವಾಗಿ ಮತ್ತು ಶಿಷ್ಟಾಚಾರವನ್ನು ಅನುಸರಿಸದೆ ಹೊಸ ಶಾಲಾ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಪ್ರಾರಂಭಿಸಿದ್ದಕ್ಕಾಗಿ ಅಸಮಾಧಾನಗೊಂಡು ಗುರುಕಲ್ ಶಾಲೆಯ ಪ್ರಾಂಶುಪಾಲ ಆರ್.ಸಿ. ವೆಂಗಲ್ ರೆಡ್ಡಿ ಅವರ ಮೇಲೆ ಕೃಷ್ಣ ಮೋಹನ್ ರೆಡ್ಡಿ ಹಲ್ಲೆ ನಡೆಸಿದ್ದಾರೆ.
ವೀಡಿಯೋದಲ್ಲಿ ಶಾಸಕರು ಪ್ರಾಂಶುಪಾಲರ ಕುತ್ತಿಗೆಯನ್ನು ಹಿಡಿದು ತಳ್ಳುವುದನ್ನು ನೋಡಬಹುದು.ಈ ಕುರಿತು ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಈ ಕೂಡಲೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.
ನಾವು ಇನ್ನೂ ಯಾವುದೇ ದೂರನ್ನು ಸ್ವೀಕರಿಸಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವೀಡಿಯೋ ವನ್ನು ನಾವು ನೋಡಿದ್ದೇವೆ. ಯಾರಾದರೂ ದೂರು ನೀಡಿದರೆ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜೋಗುಲಾಂಬಾ ಗಡ್ವಾಲ್ ಎಸ್ಪಿ ರಂಜನ್ ರತನ್ ಕುಮಾರ್ ಹೇಳಿದ್ದಾರೆ.