ತ್ರಿಪುರಾದಲ್ಲಿ ಮದುವೆ ಸಮಾರಂಭಕ್ಕೆ ದಾಳಿ ಮಾಡಿ ಮದುಮಗನನ್ನೇ ಬಂಧಿಸಿದ ಜಿಲ್ಲಾಧಿಕಾರಿ | ತೀವ್ರ ಟೀಕೆಗಳ ಬಳಿಕ ಕ್ಷಮಾಪಣೆ !

Prasthutha|

►ಅನುಮತಿ ಪತ್ರವನ್ನೂ ಹರಿದು ಹಾಕಿ ಅತಿರೇಕ !
►ವೀಡಿಯೋ + ಸುದ್ದಿ

- Advertisement -

ಅಗರ್ತಲ : ತ್ರಿಪುರಾದಲ್ಲಿ ಕರ್ಫ್ಯೂ ಉಲ್ಲಂಘಿಸಿ ರಾತ್ರಿ ನಡೆದ ಮದುವೆ ಕಾರ್ಯಕ್ರಮವೊಂದಕ್ಕೆ ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ಪ್ರಕರಣ ಇದೀಗ ವಿವಾದಕ್ಕೆ ಕಾರಣವಾಗಿದೆ. ಮದುವೆಗೆ ಆಗಮಿಸಿದ್ದ ಅತಿಥಿಗಳು ಮತ್ತು ಮದುಮಗನನ್ನು ಜಿಲ್ಲಾಧಿಕಾರಿ ತಳ್ಳುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಮದುಮಗನನ್ನೇ ಬಂಧಿಸುವಂತೆ ಆದೇಶಿಸಲಾಗಿತ್ತು. ಜಿಲ್ಲಾಧಿಕಾರಿಯ ಕಾರ್ಯಾಚರಣೆಯನ್ನು ಬಿಜೆಪಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಜಿಲ್ಲಾಧಿಕಾರಿ ಕ್ಷಮೆ ಕೋರಿದ್ದಾರೆ.

ಪಶ್ಚಿಮ ತ್ರಿಪುರಾ ಜಿಲ್ಲಾಧಿಕಾರಿ ಶೈಲೇಶ್ ಕುಮಾರ್ ಕಲ್ಯಾಣ ಮಂಟಪದ ಮೇಲೆ ದಾಳಿ ನಡೆಸಿದವರಾಗಿದ್ದಾರೆ. ರಾತ್ರಿ 10 ಗಂಟೆ ಕಳೆದ ಬಳಿಕವೂ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದಾಗ ಶೈಲೇಶ್ ಕುಮಾರ್ ಪರಿಶೀಲನೆಗೆ ಆಗಮಿಸಿದರು. ಸಭಾಂಗಣದ ಒಳಗಿದ್ದವರನ್ನೆಲ್ಲಾ ಹೊರಗೆ ಹೋಗಲು ಸೂಚಿಸಿದ ಜಿಲ್ಲಾಧಿಕಾರಿ, ಪ್ರಶ್ನಿಸಿದವರನ್ನು ಬಂಧಿಸುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು. ಮದುವೆ ಮನೆಯವರು ಅನುಮತಿ ಪತ್ರ ತೋರಿಸಿದರೂ ಅದನ್ನು ಹರಿದು ಹಾಕಿದ ಜಿಲ್ಲಾಧಿಕಾರಿಗಳು ತಮ್ಮ ದುಂಡಾವರ್ತನೆ ತೋರಿದರು.  ಪ್ರಶ್ನಿಸಲು ಮುಂದಾದ ಮದುಮಗನನ್ನು ಕೂಡ ಜಿಲ್ಲಾಧಿಕಾರಿ ತಳ್ಳಿದರು. ಸ್ಪಷ್ಟನೆ ನೀಡಲು ಮುಂದಾದ ಮದುಮಗಳ ಸಹೋದರನ ಕತ್ತಿಗೆ ಕೈಹಾಕಿ ತಳ್ಳಿ ಅವರನ್ನು ಕೂಡ ಬಂಧಿಸಲು ನಿರ್ದೇಶಿಸಿದರು. ಜಿಲ್ಲಾಧಿಕಾರಿ ಆದೇಶ ಪಾಲಿಸಲು ಮುಂದಾಗದ ಪೊಲೀಸ್ ಸಿಬ್ಬಂದಿಯ ವಿರುದ್ಧವೂ ಹರಿಹಾಯ್ದ ಜಿಲ್ಲಾಧಿಕಾರಿ ಅಮಾನತುಮಾಡುವುದಾಗಿ ಎಚ್ಚರಿಸಿದರು.

- Advertisement -

ಕೊನೆಗೂ ಜಿಲ್ಲಾಧಿಕಾರಿಯ ಆದೇಶದಂತೆ ಪೊಲೀಸರು 19 ಮಂದಿ ಮಹಿಳೆಯರ ಸಹಿತ 31 ಮಂದಿಯನ್ನು ವಶಕ್ಕೆ ಪಡೆದರು. ಜಿಲ್ಲಾಧಿಕಾರಿಯ ಅತಿರೇಕಗಳು ಮತ್ತು ಬಂಧನ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿವಿಧ ವಲಯಗಳಿಂದ ಜಿಲ್ಲಾಧಿಕಾರಿ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಯಿತು. ಮುಖ್ಯಮಂತ್ರಿ ಬಿಪ್ಲವ್ ಕುಮಾರ್ ದೇಬ್ ತನ್ನ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಘಟನೆಯ ಕುರಿತು ವರದಿ ನೀಡುವಂತೆ ಸೂಚಿಸಿದ್ದರು. ಬಿಜೆಪಿ ಶಾಸಕರು ಸೇರಿದಂತೆ ಹಲವರು ಶೈಲೇಶ್ ಕುಮಾರ್ ಅವರ ಕ್ರಮವನ್ನು ಖಂಡಿಸಿದರು. ಅಂತಿಮವಾಗಿ ಶೈಲೇಶ್ ಕುಮಾರ್ ಕ್ಷಮೆಯಾಚನೆ ಮಾಡಿ ವಿವಾದಕ್ಕೆ ತೆರೆ ಎಳೆದರು.

Join Whatsapp