Home ಟಾಪ್ ಸುದ್ದಿಗಳು ಯುಎಪಿಎ ಹೇರಿಕೆಯಿಂದ ಸತ್ಯ ಅಡಗಿಸಲು ಸಾಧ್ಯವಿಲ್ಲ: ತ್ರಿಪುರಾ ಹಿಂಸಾಚಾರ ಉಲ್ಲೇಖಿಸಿ ರಾಹುಲ್ ಗಾಂಧಿ

ಯುಎಪಿಎ ಹೇರಿಕೆಯಿಂದ ಸತ್ಯ ಅಡಗಿಸಲು ಸಾಧ್ಯವಿಲ್ಲ: ತ್ರಿಪುರಾ ಹಿಂಸಾಚಾರ ಉಲ್ಲೇಖಿಸಿ ರಾಹುಲ್ ಗಾಂಧಿ

ನವದೆಹಲಿ: ತ್ರಿಪುರಾದಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಜನರನ್ನು ಬಂಧಿಸುವ ಮೂಲಕ ಸತ್ಯವನ್ನು ಮೌನವಾಗಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
ತ್ರಿಪುರಾ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅವರು, ಮಾಹಿತಿದಾರರ ಮೇಲೆ ಗುಂಡಿಕ್ಕಿ ಹತ್ಯೆ ನಡೆಸುವ ತಂತ್ರವನ್ನು ಬಿಜೆಪಿ ಮೈಗೂಡಿಕೊಂಡಿದೆ ಎಂದು ಆರೋಪಿಸಿದರು.

ತ್ರಿಪುರಾದಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ನಡೆದ ಹಿಂಸಾಚಾರದಲ್ಲಿ ಮನೆ, ಅಂಗಡಿ, ಮಸೀದಿಗಳ ಮೇಲಿನ ದಾಳಿಗಳ ಕುರಿತು ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸಾಮಾಜಿಕ ಜಾಲತಾಣ ನಿರ್ವಾಹಕರ ವಿರುದ್ಧ ಪೊಲೀಸರು ಯುಎಪಿಎ ಹೇರಿದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ ಅವರು, ತ್ರಿಪುರಾ ಹೊತ್ತಿ ಉರಿಯುತ್ತಿದೆ ಎಂದರೆ ಅದನ್ನು ಸರ್ಕಾರ ಸರಿಯಾಗಿ ನಿಭಾಯಿಸಬೇಕು. ಆದರೆ ಬಿಜೆಪಿಯು ಮಾಹಿತಿದಾರರ ಮೇಲೆ ಗುಂಡಿಕ್ಕುವ ಮೂಲಕ ಪ್ರಕರಣವನ್ನು ಮುಚ್ಚುವ ತಂತ್ರದ ಮೊರೆಹೋಗಿದೆ. ಯುಎಪಿಎ ಹೇರಿಕೆ ಮೂಲಕ ಸತ್ಯವನ್ನು ಮೌನವಾಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ತ್ರಿಪುರಾ ಪೊಲೀಸರು ಕಳೆದ ಶನಿವಾರ ಸಾಮಾಜಿಕ ಮಾಧ್ಯಮ ಖಾತೆದಾರರ ವಿರುದ್ಧ ಯುಎಪಿಎ, ಕ್ರಿಮಿನಲ್ ಪಿತೂರಿ ಮತ್ತು ವಂಚನೆ ಪ್ರಕರಣ ದಾಖಲಿಸಿದ್ದಾರೆ ಮತ್ತು ಖಾತೆಗಳನ್ನು ರದ್ದು ಮಾಡಲು ಟ್ವಿಟ್ಟರ್, ಫೇಸ್ಬುಕ್ ಮತ್ತು ಯುಟ್ಯೂಬ್ ನ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಅದೇ ರೀತಿ ತ್ರಿಪುರಾ ಹಿಂಸಾಚಾರದ ಕುರಿತು ಸತ್ಯಶೋಧನಾ ವರದಿ ತಯಾರಿಸಲು ತೆರಳಿದ ಸುಪ್ರೀಂ ಕೋರ್ಟ್ ನ ವಕೀಲಯ ವಿರುದ್ಧ ಯುಎಪಿಎ ಮತ್ತು ಕಠಿಣ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Join Whatsapp
Exit mobile version