Home ಟಾಪ್ ಸುದ್ದಿಗಳು ತ್ರಿಪುರಾ ಹಿಂಸಾಚಾರದಲ್ಲಿ ಬಿಜೆಪಿಯೇತರ ಪಕ್ಷಗಳ ಮೌನ ಅಪಾಯಕಾರಿ: SDPI ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿ

ತ್ರಿಪುರಾ ಹಿಂಸಾಚಾರದಲ್ಲಿ ಬಿಜೆಪಿಯೇತರ ಪಕ್ಷಗಳ ಮೌನ ಅಪಾಯಕಾರಿ: SDPI ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿ

ಅಗರ್ತಲಾ: ಈಶಾನ್ಯ ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು ಗುರಿಯಾಗಿಸಿ ನಡೆಯುತ್ತಿರುವ ವ್ಯಾಪಕ ಹಿಂಸಾಚಾರದ ವಿಷಯದಲ್ಲಿ ಬಿಜೆಪಿಯೇತರ ಪಕ್ಷಗಳ ದಿವ್ಯ ಮೌನ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿ ಬೆಳವಣಿಗೆ ಎಂದು ಎಸ್.ಡಿ.ಪಿ.ಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ. ಫೈಝಿ ತಿಳಿಸಿದ್ದಾರೆ.

ಹಿಂದುಳಿದ, ದೀನದಲಿತ, ದಲಿತ ಅಲ್ಪಸಂಖ್ಯಾತ ಸಮುದಾಯ ಪರವಾಗಿ ನಿಲ್ಲಬೇಕಾದ ಮುಖ್ಯವಾಹಿನಿ ಜಾತ್ಯತೀತ ಪಕ್ಷಗಳ ಮೌನ ಅಘಾತಕಾರಿ ಎಂದು ಬಣ್ಣಿಸಿದ ಅವರು, ತ್ರಿಪುರಾದಲ್ಲಿ ಮುಸ್ಲಿಮರ ಮೇಲೆ ಸಂಘಪರಿವಾರ ಪ್ರೇರಿತ ಫ್ಯಾಶಿಸ್ಟ್ ಹಿಂಸಾಚಾರ ಶೋಚನೀಯ ಎಂದು ತಿಳಿಸಿದ್ದಾರೆ.

ಮಾತ್ರವಲ್ಲ ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ಹಿಂಸಾಚಾರಕ್ಕೆ ಪ್ರತಿಕಾರವಾಗಿ ಭಾರತದ ಮುಸ್ಲಿಮರ ಮೇಲೆ ದಾಳಿ ನಡೆಸುವಾಗ ಬಿಜೆಪಿಯೇತರ ಪಕ್ಷಗಳು ಕಣ್ಣುಮುಚ್ಚಿ ಕುಳಿತಿರುವುದು ಸಂವಿಧಾನ ಮೌಲ್ಯಕ್ಕೆ ಅಪಚಾರವಾಗಿದೆ ಎಂದು ಫೈಝಿ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾತ್ಯತೀತ ಮುಖವಾಡದ ಪಕ್ಷಗಳು ಮುಸ್ಲಿಮರನ್ನು ಕೇವಲ ಮತಬ್ಯಾಂಕ್ ಆಗಿ ಉಪಯೋಗಿಸುತ್ತಿರುವುದು ದುರಂತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ನೀಡುವ ಕೊಡಲಿಯೇಟು ಎಂದು ಅವರು ವಿಷಾದಿಸಿದರು.

ಕಳೆದ ವಾರ ನೆರೆಯ ಬಾಂಗ್ಲಾದೇಶದ ದುರ್ಗಾಪೂಜೆಯಲ್ಲಿ ಮೂರ್ತಿಯೊಂದರ ಪದತಳದಲ್ಲಿ ಕುರ್ ಆನ್ ಇಟ್ಟ ಹಿನ್ನೆಲೆಯಲ್ಲಿ ಉಂಟಾದ ಗಲಭೆಯಲ್ಲಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದಾಳಿಯನ್ನು ಮುಂದಿಟ್ಟುಕೊಂಡು ತ್ರಿಪುರಾದ ಮುಸ್ಲಿಮರ ಮೇಲಿನ ದಾಳಿ ಖಂಡನೀಯ.

ಈ ನಿಟ್ಟಿನಲ್ಲಿ ತ್ರಿಪುರಾ ಸರ್ಕಾರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಜರುಗಿಸಬೇಕೆಂದು ಎಂ.ಕೆ ಫೈಝಿ ಒತ್ತಾಯಿಸಿದ್ದಾರೆ.

Join Whatsapp
Exit mobile version