ನವದೆಹಲಿ: ವಕೀಲರು, ಪತ್ರಕರ್ತರು ಹಾಗೂ ವಿದ್ವಾಂಸರು ರೂಪಿಸಿರುವ ‘ಆರ್ಟಿಕಲ್ 14ʼ ಹೆಸರಿನ ದತ್ತಾಂಶ ಜಾಲತಾಣ ದೇಶದ್ರೋಹ ಕಾನೂನು ಬಳಕೆಗೆ ಸಂಬಂಧಿಸಿದಂತೆ ‘ಎ ಡಿಕೇಡ್ ಆಫ್ ಡಾರ್ಕ್ನೆಸ್ʼ ಎಂಬ ಮೊದಲ ಪ್ರಯೋಗಸಿದ್ಧ (ಎಂಪೆರಿಕಲ್) ಹಾಗೂ ತನಿಖಾಧರಿತ ಸಂಶೋಧನೆ ನಡೆಸಿದೆ.
2010 ರಿಂದ 2021ರವರೆಗೆ ದೇಶದ್ರೋಹ-ಸಂಬಂಧಿತ ಅಪರಾಧಗಳ ಆರೋಪ ಹೊತ್ತಿರುವವರ ಪ್ರಕರಣಗಳನ್ನು ಈ ದತ್ತಾಂಶ ದಾಖಲಿಸಿದೆ. ಅಲ್ಲದೆ ದೇಶದ್ರೋಹ ಪ್ರಕರಣಗಳನ್ನು ಎದುರಿಸುವಲ್ಲಿ ಸರ್ಕಾರ ಮತ್ತು ನ್ಯಾಯಾಲಯಗಳ ಪಾತ್ರವನ್ನು ಸಹ ವಿವರಿಸುತ್ತದೆ.
1,300 ಕಾನೂನು ದಾಖಲೆಗಳು, 800 ಮಾಧ್ಯಮ ವರದಿಗಳು, 125 ಎಫ್ ಐಆರ್ ಗಳು ಮತ್ತು ದೇಶದ್ರೋಹದ ಆರೋಪ ಹೊತ್ತಿರುವವರೊಂದಿಗೆ ನಡೆಸಿದ 70 ಕ್ಕೂ ಹೆಚ್ಚು ಸಂದರ್ಶನಗಳ ಮೂಲಕ 13,000 ಪ್ರಕರಣಗಳನ್ನು ದತ್ತಾಂಶದ ಭಾಗವಾಗಿ ನೀಡಲಾಗಿದೆ.
ಜನ
ಈ ವಿಭಾಗದಲ್ಲಿ 2010-2021ರ ನಡುವೆ 13,000 ಭಾರತೀಯರ ವಿರುದ್ಧ 800ಕ್ಕೂ ಅಧಿಕ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಿರುವ ಕುರಿತು ಸಚಿತ್ರ ವಿವರ ನೀಡಲಾಗಿದೆ. ಅದರ ಪ್ರಕಾರ ಮೇಘಾಲಯ, ಮಿಜೋರಾಂ ಮತ್ತು ನಾಗಾಲ್ಯಾಂಡ್ ನಲ್ಲಿ ಯಾವುದೇ ಪ್ರಕರಣಗಳಿಲ್ಲ. ಆದರೆ ಬಿಹಾರದಲ್ಲಿ 171, ತಮಿಳುನಾಡಿನಲ್ಲಿ 143 ಮತ್ತು ಉತ್ತರ ಪ್ರದೇಶದಲ್ಲಿ 127 ಪ್ರಕರಣಗಳು ದಾಖಲಾಗಿವೆ.
ಯುಎಪಿಎ ಕಾಯಿದೆ ರದ್ದುಗೊಳಿಸುವಂತೆ ಕೋರಿ ನಡೆಯುತ್ತಿದೆ ಪತ್ರ ಚಳವಳಿ
ದೇಶದ್ರೋಹದ ಕಾನೂನು ಬಳಕೆ ಕಳೆದ ದಶಕದಲ್ಲಿ ಹೆಚ್ಚಿದ್ದು ಇತ್ತೀಚೆಗೆ ಸಾರ್ವಜನಿಕ ಪ್ರತಿಭಟನೆಗಳು, ಭಿನ್ನಾಭಿಪ್ರಾಯಗಳು, ಸಾಮಾಜಿಕ-ಮಾಧ್ಯಮ ಪೋಸ್ಟ್ ಗಳು, ಸರ್ಕಾರದ ವಿರುದ್ಧದ ಟೀಕೆಗಳು ಮಾತ್ರವಲ್ಲದೆ ಕ್ರಿಕೆಟ್ ಫಲಿತಾಂಶಗಳ ವಿರುದ್ಧವೂ ಅದನ್ನು ಪ್ರಯೋಗಿಸಲಾಗಿದೆ ಎಂದು ಅಧ್ಯಯನ ಕಂಡುಕೊಂಡಿದೆ. ಕೃಷಿ ಪ್ರತಿಭಟನೆಗಳಿಂದ ಹಿಡಿದು ಕೋವಿಡ್ ನಂತಹ ಸಂದರ್ಭಗಳವರೆಗೆ ಹೇಗೆ ದೇಶದ್ರೋಹವನ್ನು ಅಸ್ತ್ರವಾಗಿ ಪ್ರಯೋಗಿಸಲಾಗಿದೆ ಎಂಬ ವಿವರಗಳನ್ನು ನೀಡಲಾಗಿದೆ.
2014-18: 2010 ಮತ್ತು 2014ರ ನಡುವಿನ ವಾರ್ಷಿಕ ಸರಾಸರಿಗೆ ಹೋಲಿಸಿದರೆ 2014 ಮತ್ತು 2020ರ ನಡುವಿನ ಅವಧಿಯಲ್ಲಿ ದೇಶದ್ರೋಹ ಪ್ರಕರಣಗಳಲ್ಲಿ ಶೇ.28ರಷ್ಟು ವಾರ್ಷಿಕ ಏರಿಕೆ ಕಂಡುಬಂದಿದೆ, ಈ ಅವಧಿಯಲ್ಲಿ 559 ಪ್ರಕರಣಗಳು ದಾಖಲಾಗಿವೆ.
ಸಾಮಾಜಿಕ ಮಾಧ್ಯಮ: ರಾಷ್ಟ್ರವಿರೋಧಿ ಅಥವಾ ಪಾಕಿಸ್ತಾನ ಬೆಂಬಲಿತ ವಿಚಾರಗಳನ್ನು ಹಂಚಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರ ಮೇಲೆ 106 ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿದೆ.
ಯುಪಿಎ ಎರಡನೇ ಅವಧಿ: ಯುಪಿಎ ಸರ್ಕಾರದ ಎರಡನೇ ಅವಧಿಯಲ್ಲಿ (2010 ಮತ್ತು 2014), ದೇಶದ್ರೋಹದ ಪ್ರಕರಣಗಳು ಹೆಚ್ಚಾಗಿ ದಾಖಲಾಗಿದ್ದವು. ವಿಶೇಷವಾಗಿ ತಮಿಳುನಾಡಿನ ಕೂಡಂಕುಳಂನಲ್ಲಿ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಏರಿಕೆ ಕಂಡುಬಂದಿದೆ. ಈ ಅವಧಿಯಲ್ಲಿ ಒಟ್ಟು 286 ಪ್ರಕರಣಗಳು ದಾಖಲಾಗಿವೆ.
ರೈತ ಪ್ರತಿಭಟನೆ: ಕೃಷಿ ಕಾನೂನನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರ ವಿರುದ್ಧ 8 ಮೊಕದ್ದಮೆಗಳನ್ನು ಹೂಡಲಾಗಿದೆ
ಪೌರತ್ವ: ಪೌರತ್ವ ತಿದ್ದುಪಡಿ ಕಾಯ್ದೆ- 2019 (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ವಿರುದ್ಧ ಪ್ರತಿಭಟನೆ ನಡೆಸಿದವರ ವಿರುದ್ಧ 27 ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಹಿಳೆಯರು: 2014ರಿಂದ, ದೇಶದ್ರೋಹ-ಸಂಬಂಧಿತ ಅಪರಾಧಗಳ ಆರೋಪ ಹೊತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ಸುಮಾರು ಶೇ.190ರಷ್ಟು ಹೆಚ್ಚಳವಾಗಿದೆ. ಮಹಿಳೆಯರ ವಿರುದ್ಧ 94 ಪ್ರಕರಣಗಳನ್ನು ಹಾಕಲಾಗಿದೆ.
ಪತ್ರಕರ್ತರು: ಪತ್ರಕರ್ತರ ವಿರುದ್ಧ ಒಟ್ಟು 21 ದೇಶದ್ರೋಹ ಪ್ರಕರಣಗಳು ದಾಖಲಾಗಿವೆ. ಕೃಷಿ ಕಾನೂನುಗಳು, ಕೋವಿಡ್, ಹತ್ರಾಸ್ ಸಾಮೂಹಿಕ ಅತ್ಯಾಚಾರ, ಪೌರತ್ವ ಮತ್ತು ಸರ್ಕಾರ ಟೀಕಿಸಿ ವರದಿ ಮಾಡಿದ್ದಕ್ಕಾಗಿ 2018ರಿಂದ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಕ್ರಿಕೆಟ್: 2014ರ ಏಷ್ಯಾ ಕಪ್, 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮತ್ತು ಐಸಿಸಿ ಪುರುಷರ ಟಿ 20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದದ್ದನ್ನು “ಸಂಭ್ರಮಿಸಿದ” ಆರೋಪದ ಮೇಲೆ ಅನೇಕರ ವಿರುದ್ಧ 12 ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿದೆ.
ಕೋವಿಡ್ 19: ಸಾಂಕ್ರಾಮಿಕ ರೋಗ ಹರಡಿದ ಸಮಯದಲ್ಲಿ ವೆಂಟಿಲೇಟರ್ಗಳ ಕೊರತೆ, ಆಹಾರ ವಿತರಣೆ ಅಥವಾ ವಲಸೆ ಕಾರ್ಮಿಕರ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದವರ ವಿರುದ್ಧ 12 ದೇಶದ್ರೋಹ ಮೊಕದ್ದಮೆಗಳನ್ನು ಹೂಡಲಾಗಿದೆ.
ನ್ಯಾಯಾಲಯಗಳು
ದೇಶಾದ್ಯಂತದ ನ್ಯಾಯಾಲಯಗಳು ದೇಶದ್ರೋಹದ ಆರೋಪ ಹೊತ್ತಿರುವ ಜನರೊಂದಿಗೆ ಹೇಗೆ ವ್ಯವಹರಿಸಿವೆ ಎಂಬುದನ್ನು ಈ ವಿಭಾಗ ದಾಖಲಿಸುತ್ತದೆ. ಜಾಮೀನಿನ ವಿಷಯದಲ್ಲಿ, ವಿಚಾರಣಾ ನ್ಯಾಯಾಲಯ ಅಥವಾ ಹೈಕೋರ್ಟ್ ಜಾಮೀನು ನೀಡುವ ಮೊದಲು ಆರೋಪಿಗಳು ಹಲವು ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ಆರೋಪಿಗಳು ವಿಚಾರಣಾ ನ್ಯಾಯಾಲಯದಿಂದ ಜಾಮೀನು ಪಡೆಯಲು ಸರಾಸರಿ 50 ದಿನಗಳು ಮತ್ತು ಹೈಕೋರ್ಟ್ನಿಂದ ಜಾಮೀನು ಪಡೆಯಲು 200 ದಿನಗಳವರೆಗೆ ಕಾಯಬೇಕಾಯಿತು.
ಒಟ್ಟು 1,386 ತೀರ್ಪುಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಜಾಮೀನು ನೀಡಿದ್ದಕ್ಕಿಂತ ತಿರಸ್ಕರಿಸಲು ಹೆಚ್ಚು ಒಲವು ತೋರಿವೆ. ದೇಶದ್ರೋಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ಗಳಲ್ಲಿ ಪ್ರತಿ ಏಳು ಜಾಮೀನು ಅರ್ಜಿ ಪುರಸ್ಕರಿಸಿದರೆ ಒಂದು ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ.
ಉತ್ತರ ಪ್ರದೇಶ ಪ್ರಕರಣದಲ್ಲಿ, ಪ್ರತಿಭಟನೆ, ಟೀಕೆ, ಧಾರ್ಮಿಕ ದ್ವೇಷ ಅಥವಾ ರಾಷ್ಟ್ರೀಯ ಚಿಹ್ನೆಗಳಿಗೆ ಅವಮಾನ ಮಾಡಿದ್ದಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಗಳು ಶೇ 60ರಷ್ಟು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿವೆ. ಮೇಲ್ಮನವಿ ಸಲ್ಲಿಸಿದ ನಂತರವಷ್ಟೇ ಬಹುತೇಕ ಜಾಮೀನು ಅರ್ಜಿಗಳಿಗೆ ಸಮ್ಮತಿ ಸೂಚಿಸಲಾಗಿದೆ. ಅವುಗಳಲ್ಲಿ ಶೇ 99ರಷ್ಟನ್ನು ಹೈಕೋರ್ಟ್ಗಳು ನೀಡಿವೆ.
ಜಾಮೀನು ಅರ್ಜಿಗಳ ನಿರಾಕರಣೆ ಅಥವಾ ಮಂಜೂರಾತಿ ಹಿಂದಿನ ಕಾರಣಗಳ ಬಗ್ಗೆ ಜಾಲತಾಣ ಹೀಗೆ ವಿವರಿಸುತ್ತದೆ. “ಫೇಸ್ಬುಕ್ ಪ್ರೊಫೈಲ್ ಫೋಟೋ ಅಪ್ಲೋಡ್ ಮಾಡಿದ್ದಕ್ಕಾಗಿ 32 ವರ್ಷದ ಮುಸ್ಲಿಂ ಬಾಣಸಿಗನಿಗೆ ಮೂರು ತಿಂಗಳ ಜೈಲುವಾಸದ ನಂತರ ಜಾಮೀನು ನೀಡಲಾಯಿತು. ಆರೋಪಿಯು “ದೀರ್ಘಕಾಲ ಬಂಧನದಲ್ಲಿ” ಕಳೆದಿರುವುದೇ ನ್ಯಾಯಾಲಯ ಜಾಮೀನು ನೀಡಲು ಪ್ರಮುಖ ಕಾರಣವಾಗಿದೆ. ವಿಚಾರಣೆಯ ಸಂಗತಿಗೆ ಬಂದರೆ, ಎಫ್ ಐಆರ್ ಹಂತದಿಂದ ಖುಲಾಸೆಗೊಳ್ಳುವವರೆಗೆ ಈ ಪ್ರಕರಣಗಳಲ್ಲಿ ಆರೋಪಿಗಳು 209 ರಿಂದ 3,520 ದಿನಗಳನ್ನು ಕಳೆದಿದ್ದಾರೆ.
(ಕೃಪೆ: ಬಾರ್ & ಬೆಂಚ್)