ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಟ್ರಾಕ್ಸ್ ಕ್ರೂಸರ್ ಪಲ್ಟಿಯಾಗಿ ಸೇತುವೆಯಿಂದ ಕೆಳಕ್ಕುರುಳಿ 7ಮಂದಿ ದಾರುಣವಾಗಿ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಬೆಳಗಾವಿ ನಗರದ ಹೊರವಲಯದ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಳ ಬ್ರಿಡ್ಜ್ ಬಳಿ ಭಾನುವಾರ ಬೆಳಗ್ಗೆ ನಡೆದಿದೆ.
ಕೂಲಿ ಕೆಲಸಕ್ಕೆ ಇಂದು ಬೆಳಿಗ್ಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಮೂರು ಕ್ರೂಸರ್ ಗಳ ಮಧ್ಯೆ ವೇಗವಾಗಿ ಹೋಗಲು ಚಾಲಕರ ಮಧ್ಯೆ ಪೈಪೋಟಿ ನಡೆದು ಅತಿ ವೇಗವಾಗಿ ಹೋಗುತ್ತಿದ್ದ ದಿನಗೂಲಿ ಕಾರ್ಮಿಕರಾಗಿದ್ದ 12 ಮಂದಿಯಿದ್ದ ಕ್ರೂಸರ್, ಅಕ್ಕತಂಗಿಯರ ಹಾಳದಿಂದ ಬೆಳಗಾವಿಗೆ ತೆರಳುತ್ತಿದ್ದಾಗ ಕಣಬರ್ಗಿಯ ಕಲ್ಯಾಳಪುರ ಬ್ರಿಡ್ಜ್ ಬಳಿ ಪಲ್ಟಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಗೋಕಾಕ್ ತಾಲೂಕಿನ ದಾಸನಟ್ಟಿ, ಅಕ್ಕತಂಗೇರಹಾಳ, ಎಂ ಮಲ್ಲಾಪುರದ ಕೂಲಿ ಕಾರ್ಮಿಕರಾದ ಅಡಿಯಪ್ಪ ಚಿಲಭಾವಿ, ಬಸವರಾಜ್ ದಳವಿ, ಬಸವರಾಜ್ ಹನುಮನ್ನವರ್, ಆಕಾಶ್ ರಾಮಣ್ಣ ಗತ್ತಿ, ಫಕಿರಪ್ಪ ಹರಿಜನ, ಮಲಪ್ಪ ಸೇರಿ ಸ್ಥಳದಲ್ಲಿ 7 ಮಂದಿ ಮೃತಪಟ್ಟಿದ್ದಾರೆ.
ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕಾರ್ಯಗಳ ಪರಾಮರ್ಶೆ ನಡೆಸಿದರು.
ಚಾಲಕನ ಅತಿವೇಗ, ನಿರ್ಲಕ್ಷ್ಯ ಮತ್ತು ಪೈಪೋಟಿ ಯಿಂದ ಈ ಅಪಘಾತ ಸಂಭವಿಸಿದ್ದು ಮೃತ ಕೂಲಿಕಾರ್ಮಿಕರ ರೋಧನ ಮುಗಿಲುಮುಟ್ಟಿದೆ. ಮಾರೀಹಾಳ ಪೊಲೀಸರು ಪ್ರಕರಣ ದಾಖಲಿಸಿ ಪಲ್ಟಿ ಹೊಡೆದ ಕ್ರೂಸರ್ ತೆರವುಗೊಳಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.