ಲಾಹೋರ್: ಹದಗೆಟ್ಟ ವಾತಾವರಣದ ವಿಷಕಾರಿ ಹೊಗೆಯಿಂದಾಗಿ ಪಾಕಿಸ್ತಾನದ ಸಾಂಸ್ಕೃತಿಕ ರಾಜಧಾನಿ ಲಾಹೋರ್ ತತ್ತರಿಸಿ ಹೋಗಿದೆ. ಸಾವಿರಾರು ಜನರು ಅಸ್ವಸ್ಥಗೊಂಡಿದ್ದಾರೆ. ಮುಖಕ್ಕೆ ಮಾಸ್ಕ್ ಧರಿಸಿ ಮನೆಯಲ್ಲೇ ಇರುವಂತೆ ವೈದ್ಯರು ಜನರಿಗೆ ಸಲಹೆ ನೀಡಿದ್ದಾರೆ. ಶಾಲೆಗಳು, ಮಾರುಕಟ್ಟೆಗಳು, ಉದ್ಯಾನಗಳು ನಾಲ್ಕು ದಿನಗಳ ಮಟ್ಟಿಗೆ ಬಂದ್ ಆಗಿವೆ.
ದೇಶದ ಎರಡನೇ ಅತಿದೊಡ್ಡ ನಗರವಾದ ಲಾಹೋರ್ ಅತ್ಯಂತ ಕಲುಷಿತ ನಗರ ಎಂದು ಪದೇ ಪದೇ ಸ್ಥಾನ ಪಡೆಯುತ್ತಿದೆ. ಮುಖಕ್ಕೆ ಮಾಸ್ಕ್, ಸಾಧ್ಯವಾದಷಲಷ್ಟೂ ಹೊರಗೆ ಹೋಗದಿರುವುದು ಒಳ್ಳೆಯದು ಎಂದು ಲಾಹೋರ್ನ ಮುಖ್ಯ ಮೇಯೊ ಆಸ್ಪತ್ರೆಯ ವೈದ್ಯ ಸಲ್ಮಾನ್ ಕಾಜ್ಮಿ ಹೇಳಿದ್ದಾರೆ. ಗುರುವಾರ, ಗಾಳಿಯಲ್ಲಿ PM 2.5 ಅಥವಾ ಸಣ್ಣ ಕಣಗಳ ಸಾಂದ್ರತೆಯು 450ಕ್ಕೆ ತಲುಪಿದೆ. ಇದನ್ನು ಅಪಾಯಕಾರಿ ಎಂದು ಪರಿಗಣಿಸಲಾಗಿದೆ.
ಚಳಿಗಾಲದಲ್ಲಿ ಗೋಧಿ ನಾಟಿ ಮಾಡುವ ಋತುವಿನ ಆರಂಭದಲ್ಲಿ ಬೆಳೆ ತ್ಯಾಜ್ಯವನ್ನು ಸುಡುವುದೇ ಈ ಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ. 16 ರಿಂದ 19ನೇ ಶತಮಾನದ ಮೊಘಲರ ಆಳ್ವಿಕೆಯಲ್ಲಿ ಲಾಹೋರ್ ಉದ್ಯಾನಗಳ ನಗರ ಎಂದು ಕರೆಯಲಾಗುತ್ತಿತ್ತು. ಆದರೆ, ಕ್ಷಿಪ್ರ ನಗರೀಕರಣ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯ ಬೆಳವಣಿಗೆಯು ನಗರದಲ್ಲಿ ಹಸಿರನ್ನು ಕಡಿಮೆಯಾಗಿಸಿದೆ.