ಬೆಳಗಾವಿ: ಕಾಂಗ್ರೆಸ್ ಸರ್ಕಾರ ಜನವಿರೋಧಿ ಎಂದು ಆರೊಪಿಸಿ ಸರ್ಕಾರದ ವಿರುದ್ಧ ಡಿ.13ರಂದು ಸುಮಾರು 25 ಸಾವಿರಕ್ಕೂ ಹೆಚ್ಚಿನ ಜನರೊಂದಿಗೆ ಬೃಹತ್ ಜನಾಂದೋಲನ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗುವದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ನಗರದ ಖಾಸಗಿ ಹೊಟೆಲೊಂದರಲ್ಲಿ ಕರೆದ ಬಿಜೆಪಿ ಪ್ರಮುಖರ ಸಭೆಯಲ್ಲಿ ಮಾತನಾಡಿ ಅವರು, ರಾಜ್ಯ ರಾಜಕೀಯ ಬದಲಾವಣೆಗೆ ಬೆಳಗಾವಿ ಹೆಸರಾಗಿದ್ದು ಬದಲಾವಣೆಯ ಗಾಳಿ ಬೆಳಗಾವಿಯಿಂದ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಆದ್ದರಿಂದ ಬೆಳಗಾವಿ ಜಿಲ್ಲೆಯಿಂದ ಭ್ರಷ್ಟಾಚಾರದಲ್ಲಿ ಮುಳಗಿರುವ ರಾಜ್ಯ ಕಾಂಗ್ರೆಸ್ ಕಿತ್ತೊಗೆಯಲು ಗಂಡು ಮೆಟ್ಟಿನ ಸ್ಥಳ ಬೆಳಗಾವಿಯಿಂದ ಪ್ರತಿಭಟನಾ ಹಮ್ಮಿಕೊಳ್ಳುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ನೆತೃತ್ವದ ಸರ್ಕಾರ ರಚಿಸುವ ವರೆಗೆ ವಿಶ್ರಮಿಸದೆ ಕಾರ್ಯಕರ್ತರಾದ ನಾವೆಲ್ಲರೂ ಶ್ರಮಿಸೋಣ. ಭಿಕರ ಬರಗಾಲದಲ್ಲಿ ಎಕರೆಗೆ ಪುಡಿಗಾಸು ನೀಡಲು ಇನ್ನೂ ಯೋಚಿಸುತ್ತಿರುವ ಹಾಗೂ ಹಿಂದೂ ವಿರೊಧಿ ನೀತಿ ಜಾತಿಗಳ ನಡುವೆ ಬೆಂಕಿ ಹಚ್ಚುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ತೊಲಗಿಸಬೇಕು ಎಂದು ವಿಜಯೇಂದ್ರ ಕರೆ ನೀಡಿದ್ದಾರೆ.