Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ತರಕಾರಿ ಅಂಗಡಿಯಿಂದ 40 ಕೆಜಿ ಟೊಮೆಟೊ ಕಳ್ಳತನ!

ಚಿಕ್ಕಮಗಳೂರು: ತರಕಾರಿ ಅಂಗಡಿಯಿಂದ 40 ಕೆಜಿ ಟೊಮೆಟೊ ಕಳ್ಳತನ!

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ಮಳೆ ಅಭಾವದಿಂದ ಕೃಷಿ ಕೈಗೊಟ್ಟಿರುವ ಹಿನ್ನೆಲೆ ಮಾರುಕಟ್ಟೆಗಳಲ್ಲಿ ತರಕಾರಿಗಳ ಕೊರತೆ ಎದುರಾಗಿ ಬೆಲೆಗಳು ಗಗನಮುಖಿಯಾಗಿವೆ. ಅದರಲ್ಲೂ ಕೆಂಪು ಸುಂದರಿ ಟೊಮೆಟೊ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಈ ನಡುವೆ ತರಕಾರಿ ಅಂಗಡಿಗಳ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ಟೊಮೆಟೊಗಳನ್ನು ಕಳವು ಮಾಡಲಾಗುತ್ತಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ನಡೆದ ಪ್ರಕರಣ ಇದೀಗ ಚಿಕ್ಕಮಗಳೂರಿನಲ್ಲೂ ನಡೆದಿದೆ. ತರಕಾರಿ ಅಂಗಡಿಯಿಂದ ಸುಮಾರು 40 ಕೆಜಿ ಟೊಮೆಟೊ ಕಳ್ಳತನ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲಾದ್ಯಂತ ಟೊಮೆಟೊ ಬೆಲೆ 100 ರೂಪಾಯಿಯಿಂದ 150 ರೂಪಾಯಿ ವರೆಗೆ ಇದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯ ಬಳಿ ಇರುವ ತರಕಾರಿ ಅಂಗಡಿಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದ್ದು, ಕಳ್ಳರು ಸುಮಾರು 40 ಕೆಜಿಯಷ್ಟು ಟೊಮ್ಯಾಟೊ ಕದ್ದು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ತರಕಾರಿ ಅಂಗಡಿ ಮಾಲೀಕ ನದೀಮ್ ಎಂಬವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಯಶವಂತಪುರದಲ್ಲಿ 200ಕ್ಕೂ ಅಧಿಕ ಟೊಮೆಟೊ ಟ್ರೇಗಳಿದ್ದ ಗಾಡಿಯನ್ನೇ ಕಳ್ಳತನ ಮಾಡಿದ್ದ ಪ್ರಕರಣ ನಡೆದಿತ್ತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕೋಲಾರಕ್ಕೆ ಟೊಮೆಟೊ ಸಾಗಿಸುತ್ತಿದ್ದಾಗ ಮಧ್ಯರಾತ್ರಿ ರಿಂಗ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಈ ವೇಳೆ ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಜಗಳಕ್ಕೆ ನಿಂತ ಕಾರಿನಲ್ಲಿದ್ದ ನಾಲ್ವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ಇಲ್ಲ ಎಂದಾಗ ಟೊಮೆಟೊ ಸಾಗಿಸುತ್ತಿದ್ದ ಇಬ್ಬರನ್ನು ಅದೇ ಗಾಡಿಯಲ್ಲಿ ಕೂರಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಇಬ್ಬರನ್ನು ಇಳಿಸಿ ಗಾಡಿಯನ್ನು ಕೊಂಡೊಯ್ದಿದ್ದರು.

ಇದಕ್ಕೂ ಮುನ್ನ, ಹಾಸನದ ಸೋಮನಹಳ್ಳಿಯಲ್ಲಿ ರೈತ ತನ್ನ ಜಮೀನಿನಲ್ಲಿ ಬೆಳೆದಿದ್ದ ಸುಮಾರು ಎರಡೂವರೆ ಲಕ್ಷ ಮೌಲ್ಯದ ಟೊಮೆಟೊಗಳನ್ನು ಕದ್ದೊಯ್ದಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Join Whatsapp
Exit mobile version