ರಾಮನಗರ: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯ ಮೊದಲ ಟೋಲ್ ಮಂಗಳವಾರದಿಂದ ಆರಂಭವಾಗಲಿದೆ. ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್ ಕಾರ್ಯಾಚರಣೆ ನಾಳೆಯಿಂದ ಆರಂಭವಾಗಲಿದ್ದು, ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಮಾಡುವಂತೆ ಕೇಂದ್ರ ಹೆದ್ದಾರಿ ಪ್ರಾಧಿಕಾರ ಆದೇಶ ಹೊರಡಿಸಿದೆ. ಬೆಳಗ್ಗೆ 8 ಗಂಟೆಗೆ ಟೋಲ್ ಆರಂಭವಾಗಲಿದೆ.
ಎರಡನೇ ಹಂತದ ಕಾಮಗಾರಿ ಮುಕ್ತಾಯಕ್ಕೆ ಮುನ್ನವೇ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಸರಿಯಲ್ಲ. ಮಾತ್ರವಲ್ಲ ಈ ರಸ್ತೆಯಲ್ಲಿ ನಿಗದಿಪಡಿಸಿರುವ ಶುಲ್ಕ ದುಬಾರಿಯಾಗಿದೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರು/ಜೀಪು/ವ್ಯಾನ್’ಗಳ ಏಕಮುಖ ಸಂಚಾರಕ್ಕೆ ರೂ. 135, ಅದೇ ದಿನ ಮರು ಸಂಚಾರಕ್ಕೆ ರೂ. 205, ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ ರೂ. 4525, ಬಸ್ ಅಥವಾ ಟ್ರಕ್ ಏಕಮುಖ ಸಂಚಾರಕ್ಕೆ ರೂ. 460 ಅದೇ ದಿನ ಮರು ಸಂಚಾರಕ್ಕೆ ರೂ. 690, ಒಂದು ತಿಂಗಳಲ್ಲಿ 50 ಏಕಮುಖ ಸಂಚಾರಕ್ಕೆ ತಿಂಗಳ ಪಾಸ್ ಶುಲ್ಕ ರೂ. 15325, ಲಘು ವಾಣಿಜ್ಯ ವಾಹನಗಳು, ಮೂರು ಅಕ್ಸೆಲ್ ವಾಣಿಜ್ಯ ವಾಹನಗಳು ಮತ್ತು ಭಾರಿ ನಿರ್ಮಾಣ ಯಂತ್ರಗಳಿಗೆ ವಿವಿಧ ದರಗಳನ್ನು ನಿಗದಿಪಡಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.