ಟೋಕಿಯೋ; ಟೋಕಿಯೋ ಒಲಿಂಪಿಕ್ಸ್ನ ವನಿತೆಯರ ಹಾಕಿಯಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತ ತಂಡ ಸೋಲನುಭವಿಸಿದೆ.
ಗ್ರೇಟ್ ಬ್ರಿಟನ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತದ ವನಿತೆಯರು 3-4 ಅಂತರದಲ್ಲಿ ಶರಣಾಗುವ ಮೂಲಕ ನಿರಾಸೆ ಅನುಭವಿಸಿದರು. ಇದರೊಂದಿಗೆ ಒಲಿಂಪಿಕ್ಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಪದಕ ಗೆಲ್ಲುವ ಕನಸು ಭಗ್ನವಾಗಿದೆ.
ಮೊದಲ ಕ್ವಾರ್ಟರ್ನಲ್ಲಿ ಇತ್ತಂಡಗಳಿಂದ ಸಮಬಲದ ಹೋರಾಟ ಕಂಡುಬಂದಿತ್ತು. ಆದರೆ ದ್ವಿತೀಯ ಕ್ವಾರ್ಟರ್ನಲ್ಲಿ ಬ್ರಿಟನ್ 2-0 ಗೋಲುಗಳ ಮುನ್ನಡೆ ದಾಖಲಿಸಿತ್ತು. ಬ್ರಿಟನ್ ಮುನ್ನಡೆಯಿಂದ ವಿಚಲಿತರಾಗದೆ ಆಡಿದ ಭಾರತ, ಗುರ್ಜಿತ್ ಕೌರ್ ಗಳಿಸಿದ ಆಕರ್ಷಕ ಎರಡು ಗೋಲುಗಳ ನೆರವಿನಿಂದ ಸಮಬಲ ಸಾಧಿಸಿತ್ತು.
ಬಳಿಕ ವಂದನಾ ಕಟಾರಿಯಾ ಗೋಲು ಬಾರಿಸುವುದರೊಂದಿಗೆ ಮೊದಲಾರ್ಧದಲ್ಲಿ ಭಾರತ 3-2ರ ಅಂತರದ ಮುನ್ನಡೆಯಲ್ಲಿತ್ತು.
ಈ ಮುನ್ನಡೆಯನ್ನು ಹೆಚ್ಚು ಹೊತ್ತು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಬ್ರಿಟನ್ ನಾಯಕಿ ಸಮಬಲದ ಗೋಲು ದಾಖಲಿಸಿದರು. ಕೊನೆಯ ಕಾರ್ಟರ್ನಲ್ಲಿ ಮತ್ತಷ್ಟು ಆಕ್ರಮಣಕಾರಿಯಾಗಿ ಆಡಿದ ಬ್ರಿಟನ್ ನಾಲ್ಕನೇ ಗೋಲು ಬಾರಿಸಿ 4-3 ಗೋಲುಗಳ ಅಂತರದಿಂದ ಗೆಲುವು ದಾಖಲಿಸಿತು.
ಕೊನೆಯ ಹಂತದಲ್ಲಿ ಭಾರತ ಶಕ್ತಿಮೀರಿ ಪ್ರಯತ್ನಿಸಿದರೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಸೋಲಿನ ಆಘಾತವನ್ನು ತಡೆದುಕೊಳ್ಳಲಾಗದೇ ಭಾರತೀಯ ಆಟಗಾರ್ತಿಯರು ಮೈದಾನದಲ್ಲೇ ಕಣ್ಣೀರಿಡುವ ದೃಶ್ಯವು ಪ್ರತಿಯೊಬ್ಬ ಕ್ರೀಡಾಪ್ರೇಮಿಯ ಮನಕಲಕುವಂತಿತ್ತು.
ಗುರುವಾರ ನಡೆದ ಪಂದ್ಯದಲ್ಲಿ ಜರ್ಮನಿ ತಂಡವನ್ನು 5-4 ಗೋಲುಗಳಿಂದ ಮಣಿಸಿದ್ದ ಭಾರತ ಪುರುಷ ಹಾಕಿ ತಂಡವು 41 ವರ್ಷಗಳ ಬಳಿಕ ಪದಕ ಜಯಿಸಿತ್ತು.