Home ಟಾಪ್ ಸುದ್ದಿಗಳು ಸಾರಿಯುಟ್ಟು ಫುಟ್‌ಬಾಲ್‌ ಅಂಗಳದಲ್ಲಿ ಮಿಂಚಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಸಾರಿಯುಟ್ಟು ಫುಟ್‌ಬಾಲ್‌ ಅಂಗಳದಲ್ಲಿ ಮಿಂಚಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ಕೊಲ್ಕತ್ತಾ: ಸಂಸತ್ತಿನಲ್ಲಿ ತನ್ನ ಮೊನಚಾದ ಭಾಷಣದ ಮೂಲಕವೇ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತೃಣಮೂಲ ಕಾಂಗ್ರೆಸ್‌ನ ಸಂಸದೆ  ಮಹುವಾ ಮೊಯಿತ್ರಾ, ಇದೀಗ ಫುಟ್‌ಬಾಲ್‌ ಅಂಗಳದಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ.

ಪಶ್ಚಿಮ ಬಂಗಾಳದ ಕೃಷ್ಣಾನಗರ್‌ನ ಸಂಸದೆಯಾಗಿರುವ ಮೊಯಿತ್ರಾ, ತಮ್ಮ ಕ್ಷೇತ್ರದಲ್ಲಿ ನಡೆದ ‘ಎಂಪಿ ಕಪ್ ಟೂರ್ನಮೆಂಟ್ 2022’ ರ ಫೈನಲ್‌ ಪಂದ್ಯ ವೀಕ್ಷಿಸಲು ತೆರಳಿದ್ದರು. ಆಟದ ಮೇಲಿನ ಅತೀವ ಪ್ರೀತಿಯಿಂದಾಗಿ ಸಂಸದೆ, ಮೈದಾನಕ್ಕಿಳಿದು ಸೀರೆಯಲ್ಲೇ ಫುಟ್‌ಬಾಲ್ ಆಡಿದ್ದಾರೆ. ಸ್ನೀಕರ್ಸ್‌ ( ಕ್ರೀಡಾ ಪಟುಗಳು ಬಳಸುವ ಶೂ) ಹಾಕಿಕೊಂಡು, ತಮ್ಮ ಎಂದಿನ ಕಪ್ಪು ಕನ್ನಡಕ (ಸನ್‌ ಗ್ಲಾಸ್‌)  ಧರಿಸಿ ಫುಟ್‌ ಬಾಲ್‌ ಅನ್ನು ಒದೆಯುತ್ತಿರುವ ಫೋಟೊಗಳನ್ನು ಸ್ವತಃ ಮಹುವಾ ಮೊಯಿತ್ರಾ , ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೊದಲ ಚಿತ್ರದಲ್ಲಿ ಆಟಗಾರ್ತಿಯಾಗಿ ಹಾಗೂ ಎರಡನೇ ಚಿತ್ರದಲ್ಲಿ ಸಂಸದರು ಗೋಲ್‌ ಕೀಪರ್‌ ಆಗಿ ಕಾಣಿಸಿಕೊಂಡಿದ್ದಾರೆ.

‘ಕೃಷ್ಣನಗರ ‘ಎಂಪಿ ಕಪ್ ಟೂರ್ನಮೆಂಟ್ 2022’ರ ಫೈನಲ್‌ನ ಮೋಜಿನ ಕ್ಷಣಗಳಿವು, ಹೌದು, ನಾನು ಸೀರೆಯಲ್ಲೇ ಆಡುತ್ತೇನೆ’ ಎಂದು  ಮಹುವಾ ಮೊಯಿತ್ರಾ ಟ್ವೀಟ್‌ ಮಾಡಿದ್ದಾರೆ. ಸಂಸದರು ಹಂಚಿಕೊಂಡಿರುವ ಚಿತ್ರಗಳನ್ನು11 ಸಾವಿರಕ್ಕೂ ಅಧಿಕ ಮಂದಿ, ಲೈಕ್‌ ಮಾಡಿದ್ದಾರೆ. ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುತ್ರಿ ಶರ್ಮಿಷ್ಠಾ ಮುಖರ್ಜಿ, “ಕೂಲ್, ಲವ್ ದಿ ಶಾಟ್” ಎಂದು ಪ್ರತಿಕ್ರಿಯಿಸಿದ್ದಾರೆ. 

ಸನ್‌ ಗ್ಲಾಸ್‌ ಹಾಕಿ ಯಾರಾದರೂ ಫುಟ್ಬಾಲ್‌ ಆಡುತ್ತಾರ ಎಂದು ಪ್ರಶ್ನಿಸಿದ ಅಂಕಿತ್‌ ದ್ವಿವೇದಿ ಎಂಬಾತನಿಗೆ, ʻಹಮ್‌ ಕೇಲ್ತೇ ಹೇʼ (ನಾವು ಆಡುತ್ತೇವೆ ಎಂದು ಸಂಸದೆ ಮಹುವಾ ಮೊಯಿತ್ರಾ) ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version