ಮೈಸೂರು: ಟಿಪ್ಪು ಸುಲ್ತಾನ್ ದಲಿತರಿಗೆ ಭೂಮಿಯ ಹಕ್ಕನ್ನುನೀಡಿದ್ದರು. ರಾಜ್ಯದಲ್ಲಷ್ಟೇ ಅಲ್ಲದೆ ನೆರೆಯ ಕೇರಳ, ತಮಿಳುನಾಡು ಮತ್ತು ಆಂಧ್ರದಲ್ಲೂ ದಲಿತರು ಭೂಮಿಯ ಒಡೆತನವನ್ನು ಪಡೆದಿದ್ದರು ಎಂದು ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.
ಹಝ್ರತ್ ಟಿಪ್ಪು ಸುಲ್ತಾನ್ ಶಹೀದ್ ವೆಲ್ಫೇರ್ ಮತ್ತು ಉರೂಸ್ ಸಮಿತಿ ಅಶೋಕ ರಸ್ತೆಯ ಮಿಲಾದ್ ಭಾಗ್’ನಲ್ಲಿ ಇಂದು ಆಯೋಜಿಸಲಾಗಿದ್ದ 230ನೇ ಗಂಧ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಹಿಂದೆಯೇ ಟಿಪ್ಪು ಸುಲ್ತಾನ್ ಕರ್ನಾಟಕದ ಕೀರ್ತಿಯನ್ನು ಬೆಳಗಿದ್ದು, ನಂಜನಗೂಡಿಗೆ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಪಚ್ಚ ಲಿಂಗವನ್ನು ನೀಡಿದ್ದರು. ಅಲ್ಲದೆ ಶೃಂಗೇರಿಯನ್ನು ಮರಾಠರು ಲೂಟಿ ಮಾಡಿದ ವೇಳೆ ಅಲ್ಲಿನ ಅರ್ಚಕರಿಗೆ ರಕ್ಷಣೆ ನೀಡಿದ್ದರಲ್ಲದೆ, ಧನ ಕನಕವನ್ನು ನೀಡಿದ್ದರು. ಸೌಹಾರ್ದ ಪರಂಪರೆಯನ್ನು ಕಟ್ಟಿ ಬೆಳೆಸಿದ ಟಿಪ್ಪುವನ್ನು ಕರ್ನಾಟಕದ ಜನತೆ ನಿತ್ಯ ನೆನೆಸಬೇಕೆಂದು ಮನವಿ ಮಾಡಿದರು.
ಸಣ್ಣ ಪಾಳೆಯವಾಗಿದ್ದ ಮೈಸೂರನ್ನು ಅವರು ವಿಸ್ತರಿಸಿದ್ದು, ಕೃಷ್ಣಾ ನದಿ ತೀರದಿಂದ ತಮಿಳುನಾಡಿನ ದಿಂಡಿಗಲ್ ವರೆಗೂ ಮೈಸೂರು ಸಾಮ್ರಾಜ್ಯ ವ್ಯಾಪಿಸಿತ್ತು. ಮೈಸೂರು ಅರಸರ ಗೌರವಕ್ಕೆ ಅವರು ಎಂದಿಗೂ ಧಕ್ಕೆ ತರಲಿಲ್ಲ. ಆದರೆ ಕೆಲವು ಮೂರ್ಖರು ಅವರನ್ನು ವಿರೋಧಿಸುತ್ತಿದ್ದಾರೆ. ಅವರೆಲ್ಲರೂ ಸರಿಯಾದ ಇತಿಹಾಸವನ್ನು ಓದಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಟಿಪ್ಪು ಕನ್ನಡ ವಿರೋಧಿಯಲ್ಲ. ಶೃಂಗೇರಿ ಮಠದೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಿದ್ದರು. ಟಿಪ್ಪು ಸುಲ್ತಾನ್ ಅವರ ಬಳಿಯಲ್ಲಿದ್ದ ಹಲವು ಪತ್ರ ಲಭ್ಯವಿದೆ. ಅದನ್ನು ಓದಿದರೆ ಟಿಪ್ಪು ಕನ್ನಡದ ಸುಪುತ್ರ ಎಂಬುದು ಮನದಟ್ಟಾಗುತ್ತದೆ. ಅಲ್ಲದೆ ಅಬ್ದುಲ್ ಕಲಾಂ ಅವರು ತಮ್ಮ ಪುಸ್ತಕದಲ್ಲಿ ಟಿಪ್ಪು ಮತ್ತು ಅವರ ರಾಕೆಟ್ ತಂತ್ರಜ್ಞಾನವನ್ನು ಕೊಂಡಾಡಿದ್ದಾರೆ ಎಂದು ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ.