ರಾಯಚೂರು: ಸಿರಿವಾರ ಪಟ್ಟಣದಲ್ಲಿ ಕಿಡಿಗೇಡಿಗಳು ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಮಾನ್ವಿ ತಾಲೂಕಿನ ಸಿರವಾರ ಪಟ್ಟಣದ ನಿವಾಸಿ ಆಕಾಶ್ (23) ಬಂಧಿತ ಆರೋಪಿ.
ಜನವರಿ 31ರಂದು ಮಾನ್ವಿ ತಾಲೂಕಿನ ಸಿರವಾರ ಪಟ್ಟಣದ ಮಟನ್ ಮಾರ್ಕೆಟ್ ಬಳಿ ಇರುವ ಟಿಪ್ಪು ಸರ್ಕಲ್ನಲ್ಲಿ ಹಾಕಲಾಗಿರುವ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಕಿಡಿಗೇಡಿಗಳು ರಾತ್ರೋರಾತ್ರಿ ಚಪ್ಪಲಿ ಹಾರ ಹಾಕಿ ವಿಕೃತಿ ಮೆರೆದಿದ್ದರು. ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿರುವುದು ಕಂಡ ಸ್ಥಳೀಯರು ತೀವ್ರ ಆಕ್ರೋಶ ಹೊರ ಹಾಕಿದ್ದರು. ಅಲ್ಲದೆ ರಾಜ್ಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದ್ದರು.
ಸಿರವಾರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಎರಡು ವಿಶೇಷ ತಂಡ ರಚಿಸಿದ್ದರು. ಪೊಲೀಸರು ಸ್ಥಳೀಯ ಸಿಸಿ ಟಿವಿ ಫೂಟೇಜ್ಗಳ ಪರಿಶೀಲನೆ ನಡೆಸಿದ್ದರು.
ಮೂವರು ಶಂಕಿತರನ್ನು ವಿಚಾರಣೆ ನಡೆಸಿದಾಗ ಆರೋಪಿ ಆಕಾಶ್ ತಪ್ಪೊಪ್ಪಿಕೊಂಡಿದ್ದಾನೆ.