ಮೈಸೂರು : ಶ್ರೀರಂಗಪಟ್ಟಣದ ಗುಂಬಜ್‌ನಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ, ಹುತಾತ್ಮ ಟಿಪ್ಪು ಸುಲ್ತಾನ್ ಸಮಾಧಿ ಎದುರು ಕನ್ನಡ ಚಲನಚಿತ್ರವೊಂದರ ಅಶ್ಲೀಲ ಹಾಡಿನ ಚೀತ್ರೀಕರಣ ನಡೆದಿದ್ದು, ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಕೂಡಲೇ ಸೆನ್ಸಾರ್ ಮಂಡಳಿ ಈ ದೃಶ್ಯವನ್ನು ತೆಗೆಯಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಒತ್ತಾಯಿಸಿದರು.
ನಗರದ ಎಸ್‌ಡಿಪಿಐ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಜಗತ್ತಿನ ಕೊಟ್ಯಾಂತರ ಮುಸಲ್ಮಾನರು ಮತ್ತು ಟಿಪ್ಪು ಸುಲ್ತಾನರ ಅಭಿಮಾನಿಗಳ ಪಾಲಿಗೆ ಗುಂಬಜ್ ಅತ್ಯಂತ ಪವಿತ್ರವಾದ ಸ್ಥಳವಾಗಿದೆ. ಇಲ್ಲಿ ಟಿಪ್ಪು ಸುಲ್ತಾನರು ಮತ್ತವರ ತಂದೆ ಹೈದರಾಲಿ ಹಾಗು ತಾಯಿಯವರ ಸಮಾಧಿ ಇದೆ. ಅಲ್ಲದೇ ಟಿಪ್ಪು ಸುಲ್ತಾನರ ಕುಟುಂಬದವರು, ಬ್ರಿಟೀಷರ ವಿರುದ್ಧ ಹೋರಾಡಿ ಮಡಿದ ಅಸಂಖ್ಯಾತ ಸೈನಿಕರ ಸಮಾಧಿಗಳಿವೆ. ಸನಿಹದಲ್ಲೇ ಪವಿತ್ರವಾದ ಮಸೀದಿ ಇದೆ. ಇಂತಹ ಸ್ಥಳದಲ್ಲಿ ಕೋಮಲ್ ಕುಮಾರ್ ನಟನೆಯ ನಮೋ ಭೋತಮ್ಮ ಚಿತ್ರದ ದ್ವಂದಾರ್ಥದ ಅಶ್ಲೀಲ ಹಾಡಿನ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದು ತಪ್ಪು, ಇದಕ್ಕೆ ಅಲ್ಲಿನ ಟಿಪ್ಪು ಸುಲ್ತಾನ್ ವಕ್ಫ್ ಎಸ್ಟೇಟ್ ಸಮಿತಿ ಹಾಗೂ ರಾಜ್ಯ ವಕ್ಫ್ ಮಂಡಳಿ ನೇರ ಹೊಣೆಯಾಗಿದೆ. ಶಾಸಕ ತನ್ವೀರ್ ಸೇಠ್ ಈ ಸಮಿತಿಯ ಅಧ್ಯಕ್ಷರಾಗಿದ್ದು, ವಕ್ಫ್ ಬೋರ್ಡ್ ಸದಸ್ಯರೂ ಆಗಿದ್ದಾರೆ. ಕೂಡಲೇ ನೈತಿಕ ಹೊಣೆ ಹೊತ್ತು ಅವರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡಬೇಕೆಂದು ಮಜೀದ್ ಆಗ್ರಹಿಸಿದರು.
ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ನೀಡಿದ ಪುರಾತತ್ವ ಇಲಾಖೆ ಹಾಗೂ ಸ್ಥಳೀಯವಾಗಿ ಈ ಸ್ಥಳದ ಪಾವಿತ್ರ್ಯತೆಯ ರಕ್ಷಣೆ ಮಾಡುವ ಹೊಣೆ ಹೊತ್ತಿರುವ ಎಸ್ಟೇಟ್ ಸಮಿತಿ ಸ್ಥಳದ ಮಹತ್ವದ ಬಗ್ಗೆ ಚಿತ್ರ ನಿರ್ಮಾಪಕರಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೇ ಚಿತ್ರ ನಿರ್ಮಾಪಕರು ನೀಡಿದ ಹಣದ ಆಸೆಗೆ ಟಿಪ್ಪು ಸುಲ್ತಾನ್ ವಕ್ಫ್ ಎಸ್ಟೇಟ್ ಸಮಿತಿ ಮಾರುಹೋಗಿ ಇಂತಹ ಅಶ್ಲೀಲ ಹಾಡಿನ ಚಿತ್ರೀಕರಣಕ್ಕೆ ಅವಕಾಶ ನೀಡಿದೆ ಎಂದು ಅವರು ಕಿಡಿ ಕಾರಿದರು.
ಈಗಾಗಲೇ ಈ ಚಲನಚಿತ್ರ ಬಿಡುಗಡೆಯಾಗಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ. ಇನ್ನು ಮುಂದೆ ಇಂತಹ ಯಾವುದೇ ಸಮುದಾಯಗಳ ಪವಿತ್ರ ಸ್ಥಳಗಳಲ್ಲಿ ಅಶ್ಲೀಲ ಹಾಡುಗಳ ಚಿತ್ರೀಕರಣಕ್ಕೆ ಸರ್ಕಾರ ಅವಕಾಶ ಮಾಡಿಕೊಡಬಾರದು. ಈ ಬಗ್ಗೆ ತಾವು ಮುಖ್ಯಮಂತ್ರಿಗಳು, ವಕ್ಫ್ ಸಚಿವರು ಮತ್ತು ವಕ್ಫ್ ಮಂಡಳಿಗೆ ದೂರು ನೀಡಲಿದ್ದು, ಇಂತಹ ಘಟನೆಗಳ ವಿರುದ್ಧ ಸಾರ್ವಜನಿಕರು ದನಿ ಎತ್ತಬೇಕೆಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಜಿಲ್ಲಾ ಅಧ್ಯಕ್ಷ ರಫತ್ ಖಾನ್, ಜಿಲ್ಲಾ ಉಪಾಧ್ಯಕ್ಷ ಹಾಗೂ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್.ಸ್ವಾಮಿ,ಪ್ರಧಾನ ಕಾರ್ಯದರ್ಶಿ ಸಫಿಯುಲ್ಲಾ, ಕಾರ್ಯದರ್ಶಿ ಫರ್ದೀನ್ ಅಹಮದ್ ಇದ್ದರು.
ಸಮಿತಿ ಚಪ್ಪಲಿ ಕಾಯಲಿಕ್ಕೆ ಲಾಯಕ್ಕು
ಟಿಪ್ಪು ಸುಲ್ತಾನರ ಸಮಾಧಿ ಸ್ಥಳ ಗುಂಬಜ್‌ನ ಪಾವಿತ್ರ್ಯತೆ ಕಾಪಾಡಲು ಹಾಗೂ ಅಲ್ಲಿನ ಮಸೀದಿಯ ದೈನಂದಿನ ಚಟುವಟಿಕೆ ನಿರ್ವಹಣೆಗೆ ರಚಿಸಿರುವ ಟಿಪ್ಪು ಸುಲ್ತಾನ್ ವಕ್ಫ್ ಎಸ್ಟೇಟ್ ಸಮಿತಿ ದಂಧೆ ಕೋರರ ಪಾಲಾಗಿದೆ. ಪ್ರವಾಸಿಗರ ಚಪ್ಪಲಿ ಕಾಯುವ ಹಣ ಮತ್ತು ವಾಹನ ನಿಲುಗಡೆ ಹಣಕ್ಕಾಗಿ ಇಲ್ಲಿ ಲಾಬಿ ನಡೆಯುತ್ತಿದೆ. ಈ ಪವಿತ್ರ ಸ್ಥಳದ ಧಾರ್ಮಿಕ ಪಾವಿತ್ರ್ಯತೆ ಕಾಪಾಡುವಲ್ಲಿಈ ಸಮಿತಿ ವಿಫಲವಾಗಿದ್ದು, ಕೂಡಲೇ ಚಪ್ಪಲಿ ಕಾಯಲು ಲಾಯಕ್ಕಾದ ಈ ಸಮಿತಿಯನ್ನು ರದ್ದುಗೊಳಿಸಬೇಕು.