Home ಟಾಪ್ ಸುದ್ದಿಗಳು ಟಿಪ್ಪರ್‌ ಚಾಲಕ ಹೆಲ್ಮೆಟ್‌ ಧರಿಸಿಲ್ಲವೆಂದು ರೂ. 500 ದಂಡ ವಿಧಿಸಿದ ಪೊಲೀಸರು!

ಟಿಪ್ಪರ್‌ ಚಾಲಕ ಹೆಲ್ಮೆಟ್‌ ಧರಿಸಿಲ್ಲವೆಂದು ರೂ. 500 ದಂಡ ವಿಧಿಸಿದ ಪೊಲೀಸರು!

ಹೊನ್ನಾವರ: ಪಟ್ಟಣದಲ್ಲಿ ಟಿಪ್ಪರ್‌ ಚಾಲಕ ಹೆಲ್ಮೆಟ್‌ ಧರಿಸಿಲ್ಲವೆಂದು ಇಲ್ಲಿನ ಪೊಲೀಸರು ರೂ. 500 ದಂಡ ವಿಧಿಸಿದ್ದಾರೆ. ಪೊಲೀಸರು ದಂಡ ವಿಧಿಸಿರುವ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆಲ್ಮೆಟ್ ಧರಿಸಿಲ್ಲ ಎಂದು ಟಿಪ್ಪರ್ ಚಾಲಕ ಚಂದ್ರಕಾಂತ ಎಂಬವರಿಗೆ ₹500 ದಂಡ ಹಾಕಲಾಗಿದೆ. ಹೊನ್ನಾವರದಲ್ಲಿ ಟಿಪ್ಪ‌ರ್ ಮಾಲೀಕ ತನ್ನ ವಾಹನವನ್ನು ಮರಳು ಸಾಗಾಟಕ್ಕೆ ಕಳುಹಿಸಿದ್ದ ವೇಳೆ ಟಿಪ್ಪರ್‌ ತಡೆದ ಹೊನ್ನಾವರ ಪೊಲೀಸರು, ಚಾಲಕ ಚಂದ್ರಕಾಂತ ಎಂಬವರಿಂದ ₹500 ದಂಡ ವಸೂಲಿ ಮಾಡಿದ್ದಾರೆ. ರಶೀದಿ ನೋಡಿದ ಚಾಲಕನಿಗೆ ಶಾಕ್ ಆಗಿದೆ. ಪೊಲೀಸರು ನೀಡಿರುವ ರಶೀದಿ ಪ್ರಕಾರ ಇನ್ನು ಮುಂದೆ ಹೊನ್ನಾವರಲ್ಲಿ ಟಿಪ್ಪರ್ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸದೆ ಇದ್ದರೆ ದಂಡ ಬೀಳಲಿದೆ, ಇದೇನು ಹೊಸ ನಿಯಮ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಿಎಸ್‌ಐ ಸಂತೋಷಕುಮಾರ್, ಟಿಪ್ಪರ್‌ ಚಾಲಕ ಸಮವಸ್ತ್ರ ಧರಿಸಿರಲಿಲ್ಲ. ಅದಕ್ಕೆ ₹500 ದಂಡ ವಿಧಿಸಲಾಗಿದೆ. ಆದರೆ ಕಣ್ತಪ್ಪಿನಿಂದ ಹೆಲ್ಮೆಟ್‌ ಧರಿಸದ್ದರಿಂದ ದಂಡ ಎಂದು ರಶೀದಿ ನೀಡಲಾಗಿದೆ ಎಂದಿದ್ದಾರೆ.

Join Whatsapp
Exit mobile version