ನವದೆಹಲಿ : ಬಿಜೆಪಿಯಿಂದ ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಡುವಂತೆ ರಾಜ್ಯದ ಮೂರು ಪ್ರಭಾವಿ ಸ್ವಾಮೀಜಿಗಳು ಬಿಜೆಪಿ ಹೈ ಕಮಾಂಡ್ ಗೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಮೂರು ಪ್ರಭಾವಿ ಮಠಗಳ ಮಠಾಧೀಶರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದು ರಾಜ್ಯ ಯೋಜನಾ ಆಯೋಗದ ಸದಸ್ಯ ಡಾ. ಸಿಆರ್ ನಸೀರ್ ಅಹ್ಮದ್ ಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಕರಾವಳಿ, ಉತ್ತರ ಕರ್ನಾಟಕ, ಹಾಗೂ ಮಧ್ಯ ಕರ್ನಾಟಕದ ಪ್ರಭಾವಿಗಳ ಮಠಗಳ ಮಠಾಧೀಶರು ಈ ಪತ್ರ ಬರೆದಿದ್ದು ಡಾ. ಸಿಆರ್ ನಸೀರ್ ಅಹ್ಮದ್ ಮಠದ ಭಕ್ತರಾಗಿದ್ದು, ಬಹಳಷ್ಟು ವರ್ಷಗಳಿಂದ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ರಾಜಕೀಯ ಅನುಭವವನ್ನು ಬಳಸಿಕೊಳ್ಳುವಂತೆಯೂ ಮನವಿ ಮಾಡಿದ್ದಾರೆ.
ಪ್ರಭಾವಿ ಮಠಾಧೀಶರು ಮನವಿ ಮಾಡಿರುವ ಹಿನ್ನಲೆ ಬಿಜೆಪಿ ಡಾ.ಸಿ.ಆರ್ ನಸೀರ್ ಅಹ್ಮದ್ಗೆ ಟಿಕೆಟ್ ನೀಡುತ್ತಾ ಎನ್ನುವ ಕುತೂಹಲ ಮೂಡಿಸಿದೆ. ಈ ಹಿಂದಿನ ಯಾವ ಚುನಾವಣೆಯಲ್ಲೂ ಮುಸ್ಲಿಂ ಅಭ್ಯರ್ಥಿಗಳಿಗೆ ಮಣೆ ಹಾಕದ ಬಿಜೆಪಿ, ಚುನಾವಣಾ ವರ್ಷದಲ್ಲಿ ಅವಕಾಶ ನೀಡುವ ಮೂಲಕ ಅಚ್ಚರಿಯ ನಿರ್ಧಾರ ತೆಗೆದುಕೊಳ್ಳಬಹುದೇ ಎನ್ನುವ ಕುತೂಹಲವಿದೆ.