Home ಟಾಪ್ ಸುದ್ದಿಗಳು ಶನಿವಾರಸಂತೆ ಪಾಕಿಸ್ತಾನ್ ಜಿಂದಾಬಾದ್ ಪ್ರಕರಣ: ಪತ್ರಕರ್ತ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ಶನಿವಾರಸಂತೆ ಪಾಕಿಸ್ತಾನ್ ಜಿಂದಾಬಾದ್ ಪ್ರಕರಣ: ಪತ್ರಕರ್ತ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ಮಡಿಕೇರಿ: ಮುಸ್ಲಿಂ ಮಹಿಳೆಯರು ಶನಿವಾರಸಂತೆ ಪೊಲೀಸ್ ಠಾಣೆಯ ಎದುರು ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಅಂಬೇಡ್ಕರ್ ಜಿಂದಾಬಾದ್ ಘೋಷಣೆ ಕೂಗಿರುವುದನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿರುವ ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತ ಸೇರಿದಂತೆ ಮೂವರು ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶನಿವಾರಸಂತೆ ಗ್ರಾಮ ಪಂಚಾಯತಿ ಸದಸ್ಯ ರಘು ಮತ್ತು ಮಾಜಿ ಸದಸ್ಯ ಹರೀಶ್ ಕೋಮು ಸೌಹಾರ್ದತೆಯನ್ನು ಕದಡುವ ದುರುದ್ದೇಶದಿಂದ ಪ್ರತಿಭಟನೆಯ ಸಂದರ್ಭದಲ್ಲಿ ಮುಸ್ಲಿಂ ಮಹಿಳೆಯರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ, ಹಿಂದೂ ಸಂಘಟನೆಗಳ ಮೇಲೆ ದಬ್ಬಾಳಿಕೆ ನಡೆಸುತ್ತಲೆ ಬಂದಿದ್ದಾರೆ. ಹಾಗಾಗಿ ಶನಿವಾರಸಂತೆ ಬಂದ್ ಮಾಡಿ ಪ್ರತಿಭಟಿಸುವುದಾಗಿ ಕರೆ ನೀಡಿದ್ದಾರೆ. ಇವರ ಮಾತಿನಿಂದ ಪ್ರಚೋದನೆ ಒಳಗಾಗಿ ಕುಶಾಲನಗರದ ಗಿರೀಶ್ ತಿರುಚಿದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಸಮಾಜದಲ್ಲಿ ಕೋಮು ಸೌಹಾರ್ದತೆ ಕದಡುವಂತೆ ಮಾಡಿದ್ದಾರೆ ಎಂದು ಪೊಲೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರತಿಭಟನೆಯ ಸಮಯದಲ್ಲಿ ಮುಸ್ಲಿಂ ಮಹಿಳೆಯರು ಪಾಕಿಸ್ತಾನ್ ಪರ ಘೋಷಣೆ ಕೂಗಿಲ್ಲವೆಂದು ಪೊಲೀಸ್ ವರದಿಯಲ್ಲಿ ದಾಖಲಾಗಿದೆ.

ವೀಡಿಯೋ ತಿರುಚಿರುವ ವ್ಯಕ್ತಿಗಳ ಬಗ್ಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜಿಲ್ಲೆಯ ವಿವಿಧ ಸಂಘಟನೆಗಳು ಆಗ್ರಹಿಸಿದ್ದರು.

ಬಳಿಕ ಶನಿವಾರಸಂತೆ ಪೊಲೀಸರು ಸೋಮವಾರಪೇಟೆ ತಾಲ್ಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಹರೀಶ್, ಶನಿವಾಸಂತೆ ಗ್ರಾಮ ಪಂಚಾಯತಿ ಹಾಲಿ ಸದಸ್ಯ ರಘು ಎಸ್.ಎನ್ ಮತ್ತು ಗಿರೀಶ್ ಕುಶಾಲನಗರ ಮೂವರ ವಿರುದ್ಧ ಐಪಿಸಿ 34,153 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆ ಮುಸ್ಲಿಂ ವ್ಯಕ್ತಿಯ ವಾಹನಕ್ಕೆ ಬೆಂಕಿ ಹಚ್ಚಿರುವ ಪ್ರಕರಣದಲ್ಲಿ ಕೂಡಾ ಪತ್ರಕರ್ತ ಹರೀಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.

ದೇಶದ್ರೋಹ ಪ್ರಕರಣದ ಬದಲು ಲಘು ಸೆಕ್ಷನ್: ಅಂಬೇಡ್ಕರ್ ಜಿಂದಾಬಾದ್ ವೀಡಿಯೋವನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿ ಪೊಲೀಸರ ಎದುರಲ್ಲೇ ಪಾಕಿಸ್ತಾನ್ ಪರ ಘೋಷಣೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ಶನಿವಾರಸಂತೆ ಪೊಲೀಸರ ದೇಶಪ್ರೇಮವನ್ನೇ ಪ್ರಶ್ನೆ ಮಾಡಿದ ಘಟನೆ ನಡೆದರೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳದೆ ಲಘು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರ ಕ್ರಮದ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಗೂ ಬಂದ್ ದಿನ ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ.

Join Whatsapp
Exit mobile version