ಭದೋಹಿ: ಇಲ್ಲಿನ ದುರ್ಗಾಪೂಜಾ ಚಪ್ಪರದಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಸಾವನ್ನಪ್ಪಿದ್ದು, 64 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಭಾನುವಾರ ರಾತ್ರಿ ಚಪ್ಪರದಲ್ಲಿ ಡಿಜಿಟಲ್ ಶೋ ನಡೆಯುತ್ತಿದ್ದು, ಹ್ಯಾಲೊಜೆನ್ ಲೈಟ್ ಅತಿಯಾಗಿ ಬಿಸಿಯಾದ ಕಾರಣ ಚಪ್ಪರಕ್ಕೆ ಬೆಂಕಿ ಹಿಡಿದಿದೆ.
ಚಪ್ಪರದಲ್ಲಿ ಸುಮಾರು 300-400 ಮಂದಿ ಇದ್ದರು. ಬೆಂಕಿಯಲ್ಲಿ ಒಟ್ಟು 67 ಜನರು ಗಾಯಗೊಂಡಿದ್ದಾರೆ ಮತ್ತು ಅವರಲ್ಲಿ ಮೂವರು – ಅಂಕುಶ್ ಸೋನಿ (12), ಜಯ ದೇವಿ (45) ಮತ್ತು ನವೀನ್ (10) ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೌರಂಗ್ ರಾಥಿ ತಿಳಿಸಿದ್ದಾರೆ.
ಎಲ್ಲಾ ಗಾಯಾಳುಗಳನ್ನು ಗುರುತಿಸಲಾಗಿದ್ದು, ಜಿಲ್ಲಾಡಳಿತ ಮತ್ತು ಪೊಲೀಸರ ಬಳಿ ಅವರ ಪಟ್ಟಿ ಇದೆ ಎಂದು ಅವರು ಹೇಳಿದರು. ಚಪ್ಪರದಲ್ಲಿ ಹೆಚ್ಚಿನ ಜನರು ಮಹಿಳೆಯರು ಮತ್ತು ಮಕ್ಕಳಿದ್ದರು ಎಂದು ಹೇಳಿದರು.
ಬೆಂಕಿಯ ಕಾರಣವನ್ನು ಹೆಚ್ಚುವರಿ ಮಹಾನಿರ್ದೇಶಕ ರಾಮ್ ಕುಮಾರ್ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವು ಪತ್ತೆ ಮಾಡಿದೆ ಎಂದು ಡಿಎಂ ತಿಳಿಸಿದ್ದಾರೆ.
ಔರೈ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ತಿಳಿಸಿದ್ದಾರೆ.