ತಿರುವನಂತಪುರಂ: ಕಲ್ಲಾರ್ ನದಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಸಹೋದರರು ಮತ್ತು ಸಹೋದರಿಯ ಪುತ್ರ ಸೇರಿದಂತೆ ಮೂವರು ಸುಳಿಯಲ್ಲಿ ಸಿಲುಕಿ, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ರಾಜಧಾನಿಯ ಬೀಮಾಪಳ್ಳಿ ಮೂಲದ ಸಫ್ವಾನ್, ಫಿರೋಝ್ ಹಾಗೂ ಜವಾದ್ ಮೃತಪಟ್ಟವರು.
ಫಿರೋಝ್, ಎಸ್ ಎಪಿ ಕ್ಯಾಂಪ್ ನಲ್ಲಿ ಪೊಲೀಸ್ ಮತ್ತು ಜವಾದ್, ಭೀಮಪಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
ಎಂಟು ಮಂದಿಯ ತಂಡ ಪೊನ್ಮುಡಿಗೆ ಪ್ರಯಾಣಿಸುವ ವೇಳೆ, ಮಾರ್ಗ ಮಧ್ಯದ ವಟ್ಟಕಾಯತ್ ಎಂಬಲ್ಲಿರುವ ಕಲ್ಲಾರ್ ಎಂಬಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ವರು ನೀರಿಗೆ ಇಳಿದಿದ್ದರು. ಈ ವೇಳೆ ಸುಳಿಯಲ್ಲಿ ಸಿಲುಕಿದ್ದರಲ್ಲಿ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದರಾದರೂ, ಮೂವರನ್ನು ನದಿಯ ದಡ ತಲುಪಿಸುವಷ್ಟರಲ್ಲಿ ಸಾವನ್ನಪ್ಪಿದ್ದರು. ಮೃತ ಫಿರೋಝ್ ಮತ್ತು ಜವಾದ್ ಸಹೋದರರಾಗಿದ್ದಾರೆ. ವಿದ್ಯಾರ್ಥಿಯಾಗಿರುವ ಸಫ್ವಾನ್ ಅವರ ಸಹೋದರಿಯ ಮಗ.
ದುರಂತ ನಡೆದ ಸ್ಥಳ ಅತ್ಯಂತ ಅಪಾಯಕಾರಿಯಾಗಿದ್ದು, ಇಲ್ಲಿ ನೀರಿಗೆ ಇಳಿಯಬಾರದು ಎಂಬ ಬೋರ್ಡ್ ಗಳನ್ನು ಅಳವಡಿಸಲಾಗಿತ್ತು. ಆದರೆ ಇದನ್ನು ನಿರ್ಲಕ್ಷಿಸಿ ನಾಲ್ವರು ನದಿಗೆ ಇಳಿದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಮೃತ ದೇಹಗಳನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಬುಧವಾರ ಸಂಬಂಧಿಕರಿಗೆ ಬಿಟ್ಟುಕೊಡಲಾಗುವುದು ಎಂದು ತಿಳಿದು ಬಂದಿದೆ.