ತಿರುಪತಿ: ಮಹಿಳೆಯೊಬ್ಬಳು ತನ್ನ ಮೇಕಪ್ ನಿಂದಲೇ ಮೋಡಿಮಾಡಿ ಮೂವರನ್ನು ಮದುವೆಯಾಗಿದ್ದು, ಕೊನೆಗೆ ಮೂರನೇ ಪತಿ ಆಕೆಯ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಅಸಲಿಯತ್ತು ಬಯಲಾಗಿದೆ.
ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಪುತ್ತೂರಿನಲ್ಲಿ ಇಂತಹದೊಂದು ಪ್ರಕರಣ ಬೆಳಕಿಗೆ ಬಂದಿದೆ. ಶರಣ್ಯಾ ಎಂಬ ಮಹಿಳೆಯೇ ಮೋಸ ಮಾಡಿದ ಮಹಿಳೆ.
ಶರಣ್ಯಾ ಮೊದಲಿಗೆ ತಮ್ಮದೇ ಊರಿನ ರವಿ ಎಂಬಾತನನ್ನು ಮದುವೆಯಾಗಿದ್ದರು. ಇಬ್ಬರು ಹೆಣ್ಣು ಮಕ್ಕಳ ಜನನದ ಬಳಿಕ ಭಿನ್ನಾಭಿಪ್ರಾಯಗಳಿಂದ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ನಂತರ ತಮ್ಮ ಹೆಸರನ್ನು ಸುಕನ್ಯಾ ಎಂದು ಬದಲಾಯಿಸಿಕೊಂಡ ಆಕೆ ತಮಿಳುನಾಡಿನ ವೆಲ್ಲೂರು ಮೂಲದ ಸುಬ್ರಮಣ್ಯಂ ಎಂಬುವರನ್ನು ವಿವಾಹವಾದರು.
ಬಳಿಕ ಶರಣ್ಯಾಳಿಗೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಪುದುಪೇಟಾ ಮೂಲದ ಗಣೇಶ್ 2021ರಲ್ಲಿ ಮದುವೆ ಬ್ರೋಕರ್ ಮೂಲಕ ಪರಿಚಯ ಆಗಿದ್ದಾರೆ. ಅವರನ್ನೂ ಮದುವೆಯಾಗಲು ಯೋಚನೆ ಹಾಕಿದ ಶರಣ್ಯಾ ಅದರಂತೆ ಮುಂದುವರಿಯುತ್ತಾರೆ. ಕೊನೆಗೆ ತಿರುವಳ್ಳೂರಿನಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯುತ್ತದೆ.
ಮದುವೆಯಾದ ಆರಂಭದ ದಿನಗಳಲ್ಲಿ ಗಂಡ ಮತ್ತು ಅತ್ತೆ ಮೇಲೆ ಪ್ರೀತಿ ತೋರಿಸತೊಡಗಿದ ಶರಣ್ಯಾ ಬಳಿಕ ಆಸ್ತಿ ಕಬಳಿಸಲು ಯೋಚಿಸುತ್ತಾರೆ. ಹೀಗಾಗಿ ಅತ್ತೆ ಇಂದ್ರಾಣಿಯನ್ನು ಮನೆಯಿಂದ ಹೊರ ಹಾಕುತ್ತಾರೆ. ಅದರಂತೆ ಶರಣ್ಯಾರ ಪತಿ ಆಸ್ತಿ ನೋಂದಣಿಗೆ ಶರಣ್ಯಾರ ಆಧಾರ್ ಕಾರ್ಡ್ ನೀಡುವಂತೆ ಕೇಳಿದ್ದಾರೆ. ಶರಣ್ಯಾ ತಮ್ಮ ಪತಿಗೆ ಆಧಾರ್ ಕಾರ್ಡ್ ನೀಡಿದ್ದಾರೆ. ಆಧಾರ್ ಕಾರ್ಡ್ ನಲ್ಲಿ ಹೆಸರು ಹಾಗೂ ಫೋಟೋ ಬೇರೆ ಇರುವುದನ್ನು ಕಂಡ ಶರಣ್ಯಾರ ಅತ್ತೆ ಮತ್ತು ಪತಿ ಗಣೇಶ್ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ತನಿಖೆ ನಡೆಸಿದಾಗ ಆಕೆಯ ಅಸಲಿಯತ್ತು ಬಯಲಾಗಿದೆ.