ಗದಗ: ಕುರಿ ಮೇಯಿಸಲು ಹೋದ ಐವರು ಬಾಲಕಿಯರಲ್ಲಿ ಮೂವರು ಕೃಷಿ ಹೊಂಡದ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮುಂಡರಗಿ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ನಡೆದಿದೆ.
ಗೋವಾದಲ್ಲಿ ವಾಸವಾಗಿದ್ದ ಅಂಕಿತಾ ಲಮಾಣಿ(13), ಸುನಿತಾ ಲಮಾಣಿ (11) ಹಾಗೂ ಸುನಿತಾ(10) ಮೃತ ಬಾಲಕಿಯರು.
ಐವರು ಬಾಲಕಿಯರು ಒಟ್ಟಾಗಿ ಕುರಿ ಮರಿಗಳನ್ನು ಮೇಯಿಸಲು ಊರ ಪಕ್ಕಕ್ಕೆ ಹೋಗಿದ್ದರು. ಈ ವೇಳೆ ಜಮೀನಿನಲ್ಲಿದ್ದ ಕೃಷಿ ಹೊಂಡ ನೋಡಿ ನೀರು ಕುಡಿಯಲು ಹೋದ ವೇಳೆ ಕಾಲು ಜಾರಿ ಬಿದ್ದಿದ್ದಾರೆ.
ಇದೇ ತಿಂಗಳ ಮೇ. 22ರಂದು ನಡೆಯಲಿದ್ದ ಚಿಕ್ಕಪ್ಪನ ಮದುವೆ ಸಲುವಾಗಿ ಪಾಲಕರೊಂದಿಗೆ ಬಾಲಕಿಯರು ಗೋವಾದಿಂದ ಅತ್ತಿಕಟ್ಟಿ ಗ್ರಾಮಕ್ಕೆ ಬಂದಿದ್ದರು. ಮೃತ ಬಾಲಕಿಯರಲ್ಲಿ ಅಂಕಿತಾ ಹಾಗೂ ಸುನಿತಾ ಸಹೋದರಿಯರು. ಮತ್ತೋರ್ವ ಮೃತ ಬಾಲಕಿ ಸುನಿತಾ ಡೋಣಿ ತಾಂಡ ನಿವಾಸಿ. ಮದುವೆ ಮನೆಯಲ್ಲಿ ಒಟ್ಟಾಗಿದ್ದ ಬಾಲಕಿಯರು ಒಟ್ಟಾಗಿ ಸಂಜೆ ಕುರಿ ಮರಿಗಳನ್ನು ಮೇಯಿಸಲು ಹೋಗಿದ್ದಾಗ ನೀರು ಕುಡಿಯಲು ಹೊಂಡಕ್ಕೆ ಹೋದ ಅಂಕಿತಾ ಜಾರಿ ಮುಳುಗ ತೊಡಗಿದ್ದು ಆಕೆಯ ರಕ್ಷಣೆಗೆ ಹೋದ ಉಳಿದಿಬ್ಬರು ಮುಳುಗಿ ಸೇರಿ ಮೂವರು ಮೃತಪಟ್ಟಿದ್ದಾರೆ.
ಸ್ಥಳೀಯ ಬಸವರಾಜ್ ಲಮಾಣಿ ಎಂಬವರ ಜಮೀನಿನಲ್ಲಿದ್ದ ಕೃಷಿ ಹೊಂಡಕ್ಕೆ ಮಕ್ಕಳು ಇಳಿದಿರುವುದನ್ನು ಚಿಕ್ಕಪ್ಪ ಗೋವಿಂದ ಲಮಾಣಿ ನೋಡಿದ್ದಾರೆ. ಸ್ಥಳಕ್ಕೆ ಬಂದಾಗ ಮಕ್ಕಳು ನೀರಲ್ಲಿ ಮುಳುಗಿದ್ದು ತಿಳಿದಿದೆ. ಈ ವೇಳೆ ಇಬ್ಬರನ್ನು ರಕ್ಷಣೆ ಮಾಡಿದ್ದು, ಉಳಿದ ಬಾಲಕಿಯರು ಮುಳುಗಿರುವುದನ್ನು ಕುಟುಂಬಸ್ಥರಿಗೆ ಹಾಗೂ ಸ್ಥಳೀಯರಿಗೆ ತಿಳಿಸಿದ್ದಾರೆ.
ತಕ್ಷಣವೇ ಘಟನಾ ಸ್ಥಳಕ್ಕೆ ಸ್ಥಳೀಯರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಬಂದಿದ್ದು, ಉಳಿದ ಮೂವರು ಬಾಲಕಿಯರ ಶವವನ್ನು ಕೃಷಿ ಹೊಂಡದಿಂದ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಮುಂಡರಗಿ ಪೊಲೀಸರು ಹಾಗೂ ತಹಶೀಲ್ದಾರ್ ಆಶಪ್ಪ ಪೂಜಾರ ಭೇಟಿ ನಿಡಿ, ಪರಿಶೀಲನೆ ನಡೆಸಿದರು. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.