Home ಟಾಪ್ ಸುದ್ದಿಗಳು ಹಡಗಿನ ಮೇಲೆ ಹೌದಿಗಳ ಕ್ಷಿಪಣಿ ದಾಳಿಯಲ್ಲಿ ಮೂವರು ಮೃತ್ಯು: ಅಮೆರಿಕ

ಹಡಗಿನ ಮೇಲೆ ಹೌದಿಗಳ ಕ್ಷಿಪಣಿ ದಾಳಿಯಲ್ಲಿ ಮೂವರು ಮೃತ್ಯು: ಅಮೆರಿಕ

ದುಬೈ : ಏಡನ್ ಕೊಲ್ಲಿಯ ಬಳಿ ಸಾಗುತ್ತಿದ್ದ ಹಡಗಿನ ಮೇಲೆ ಯೆಮನ್‍ನ ಹೌದಿಗಳು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದರಲ್ಲದೆ, ಇತರ 4 ಮಂದಿ ಗಾಯಗೊಂಡಿರುವುದಾಗಿ ಅಮೆರಿಕದ ಮಿಲಿಟರಿ ಹೇಳಿದೆ.

ಲೈಬೀರಿಯಾ ಒಡೆತನದ, ಬಾರ್ಬಡೋಸ್ ಧ್ವಜ ಹೊಂದಿದ್ದ ಎಂವಿ ಟ್ರೂ ಕಾನ್ಪಿಡೆನ್ಸ್ ಹಡಗಿನ ಮೇಲೆ ಹೌದಿಗಳು ಪ್ರಯೋಗಿಸಿದ ಹಡಗು ವಿರೋಧಿ ಬ್ಯಾಲಿಸ್ಟಿಕ್ ಕ್ಷಿಪಣಿ ಅಪ್ಪಳಿಸಿದೆ.

ಹೌದಿಗಳ ದಾಳಿಯಿಂದ ಬೆಂಕಿ ಹತ್ತಿಕೊಂಡ ಟ್ರೂ ಕಾನ್ಫಿಡೆನ್ಸ್ ಹಡಗಿನ ರಕ್ಷಣೆಗೆ ಭಾರತದ ನೌಕಾಪಡೆಯ ಯುದ್ಧನೌಕೆ `ಐಎನ್‍ಎಸ್ ಕೊಲ್ಕತಾ’ ಧಾವಿಸಿದ್ದು ಬೆಂಕಿಯನ್ನು ನಿಯಂತ್ರಿಸಿದೆ ಮತ್ತು ಗಾಯಗೊಂಡ ಸಿಬಂದಿಗಳನ್ನು ಯುದ್ಧನೌಕೆಗೆ ಸ್ಥಳಾಂತರಿಸಿ ಸೂಕ್ತ ಪ್ರಾಥಮಿಕ ಚಿಕಿತ್ಸೆ ಒದಗಿಸಲಾಗಿದೆ.

ಮಿತ್ರರಾಷ್ಟ್ರಗಳ ಸಮರನೌಕೆ ಹಾನಿಗೊಳಗಾದ ಹಡಗಿನ ಸಿಬ್ಬಂದಿಯನ್ನು ರಕ್ಷಿಸಿದೆ ಎಂದು ಅಮೆರಿಕ ಮಿಲಿಟರಿ ಹೇಳಿಕೆ ತಿಳಿಸಿದೆ.

ಎಚ್ಚರಿಕೆ ಸಂದೇಶಗಳನ್ನು ಹಡಗು ತಿರಸ್ಕರಿಸಿದ್ದರಿಂದ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಹೌದಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಟ್ರೂ ಕಾನ್ಪಿಡೆನ್ಸ್ ಹಡಗಿನ ಮೇಲೆ ದಾಳಿ ನಡೆದ ಕೆಲ ಸಮಯದ ಬಳಿಕ ಯೆಮನ್‍ನಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಸನ್ನದ್ಧ ಸ್ಥಿತಿಯಲ್ಲಿರಿಸಿದ್ದ ಎರಡು ಡ್ರೋನ್‍ಗಳನ್ನು ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಮಿಲಿಟರಿ ಹೇಳಿದೆ.

Join Whatsapp
Exit mobile version