Home ಕರಾವಳಿ ಮಂಗಳೂರು ರಥಬೀದಿ ಸರಕಾರಿ ಕಾಲೇಜು ಪ್ರಕರಣ | ಮೂರು ಪ್ರಕರಣಗಳು ತನಿಖೆ ಹಂತದಲ್ಲಿವೆ: ಕಮಿಷನರ್ ಶಶಿಕುಮಾರ್

ಮಂಗಳೂರು ರಥಬೀದಿ ಸರಕಾರಿ ಕಾಲೇಜು ಪ್ರಕರಣ | ಮೂರು ಪ್ರಕರಣಗಳು ತನಿಖೆ ಹಂತದಲ್ಲಿವೆ: ಕಮಿಷನರ್ ಶಶಿಕುಮಾರ್

ಮಂಗಳೂರು: ನಗರದ ರಥಬೀದಿ ಸರಕಾರಿ ಕಾಲೇಜು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ತನಿಖೆಯ ಹಂತದಲ್ಲಿದ್ದು, ಹಿರಿಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ.

 ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಕರಣ ಸಂಬಂಧ ಇತ್ತಂಡಗಳ ಮೂರು ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಬಂದರು ಠಾಣೆಯಲ್ಲಿ ಎರಡು, ಸೆನ್ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ತನಿಖೆ ಸಂಬಂಧ ಕೆಲವರಿಗೆ ನೋಟೀಸ್ ನೀಡಲಾಗಿದೆ. ಶೀಘ್ರವೇ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.

ಅಲ್ಲದೆ, ಪ್ರಾಂಶುಪಾಲರು ಕೂಡಾ ಪ್ರತ್ಯೇಕ ದೂರು ನೀಡಿದ್ದಾರೆ. ಆದರೆ ಪ್ರಾಂಶುಪಾಲರು ಅನುಮತಿ ನೀಡಿದ್ದಾಗಿ ವಿದ್ಯಾರ್ಥಿಗಳು ಸುಳ್ಳು ಹೇಳಿದ್ದಾರೆ. ಕಾಲೇಜಿನ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಕಾಲೇಜಿನಲ್ಲಿ ಸಿಡಿಸಿ ನಿಯಮದ ಸಮವಸ್ತ್ರ ಜಾರಿಯಲ್ಲಿದೆ. ಕಾಲೇಜು ತರಗತಿಗೆ ಅಡ್ಡಿಪಡಿಸಿದ್ದಾಗಿ ಹಿಬಾ ಶೇಖ್ ವಿರುದ್ಧ ದೂರು ದಾಖಲಾಗಿದೆ. ಆದರೆ ಪ್ರಾಂಶುಪಾಲರ ದೂರಿನನ್ವಯ FIR ದಾಖಲಿಸಲು ಸಾಧ್ಯವಿಲ್ಲ. ಆದರೆ ಸಂಬಂಧಪಟ್ಟ ಅಧಿಕಾರಿಗಳಿಗಷ್ಟೇ ಅವರು ದೂರು ನೀಡಬಹುದು ಎಂದು ಹೇಳಿದರು.

 ಹಿಬಾ ಶೇಖ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾನೇ ಠಾಣೆಗೆ ತೆರಳಿ ದೂರುದಾರರ ದೂರು ಆಲಿಸಿದ್ದೇನೆ. ದೂರುದಾರರು ನನ್ನ ಬಳಿ ಬಂದಿಲ್ಲ.ಸೋಶಿಯಲ್ ಮೀಡಿಯಾದಲ್ಲಿ ಪೊಲೀಸರ ಬಗ್ಗೆ ಬರುತ್ತಿರುವ ಆರೋಪದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಎಲ್ಲೋ ಕೂತು ಮೆಸೇಜ್ ಮಾಡ್ತಾರೆ, ಆದರೆ ಪೊಲೀಸರ ತನಿಖೆ ಪಾರದರ್ಶಕವಾಗಿದೆ. ಹಾಗಂತ ಅದನ್ನು ಮಾನಿಟರಿಂಗ್ ಮಾಡಲಾಗುತ್ತಿದೆ. ಹಿಜಾಬ್ ವಿವಾದ ಶಿಕ್ಷಣ ಸಂಸ್ಥೆ ಮತ್ತು ಸಂಬಂಧಪಟ್ಟ ಇಲಾಖೆಗೆ ಸಂಬಂಧಿಸಿದ್ದಾಗಿದ್ದು, ಪೊಲೀಸ್ ಅಧಿಕಾರಿಗಳು ಕೇವಲ ಕಾನೂನು ಸುವ್ಯವಸ್ಥೆ ಅಷ್ಟೇ ಕಾಪಾಡುತ್ತಾರೆ ಎಂದು ತಿಳಿಸಿದರು.  

Join Whatsapp
Exit mobile version