ಬೆಂಗಳೂರು: ತಮಿಳುನಾಡಿನ ಮಾಜಿ ರಾಜ್ಯಪಾಲ ಸಿಎಂ ರೋಸಯ್ಯ ಅವರ ಸಂಬಂಧಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಚಿನ್ನಾಭರಣ ವ್ಯಾಪಾರಿ ಮನೋಜ್ ಕುಮಾರ್ ಗ್ರಾಂಧಿ ಅವರ ಕೊಲೆ ಪ್ರಕರಣದಲ್ಲಿ ಮೂವರು ಕ್ಯಾಬ್ ಚಾಲಕರಿಗೆ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಕಳೆದ 2012ರ ಫೆ 7ರಂದು ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಸುದೀರ್ಘ ವಿಚಾರಣೆ ನಡೆಸಿದ ನಗರದ 52ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಜಿ ಪ್ರಮೋದಾ ಅವರು ಮೂವರು ಆರೋಪಿಗಳಾದ ರವಿಕುಮಾರ್, ಕೃಷ್ಣೇಗೌಡ ಮತ್ತು ಶಿವಲಿಂಗಯ್ಯ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ತಲಾ 20 ಸಾವಿರ ರೂ. ಗಳ ದಂಡ ವಿಧಿಸಿ ಆದೇಶಿದೆ.
ಕೊಲೆ ಪ್ರಕರಣದಲ್ಲಿ (302) ತಲಾ 10 ಸಾವಿರ ರೂ ಹಾಗೂ ಕೊಲೆ ಮಾಡಲು ಸಂಚು ರೂಪಿಸಿದ ಪ್ರಕರಣದಲ್ಲಿ ತಲಾ (120ಬಿ) 10 ಸಾವಿರ ರೂ ಸೇರಿ ಒಟ್ಟು ತಲಾ 20 ಸಾವಿರ ರೂ. ಗಳ ದಂಡ ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಮೃತ ಮನೋಜ್ ಕುಮಾರ್ ಗ್ರಾಂಧಿ 2012ರ ಫೆಬ್ರವರಿಯಲ್ಲಿ ನಗರಕ್ಕೆ ಬಂದಿದ್ದು, ಕೊಟ್ಯಂತರ ರೂಗಳ ಮೌಲ್ಯದ ಚಿನ್ನಾಭರಣಗಳನ್ನು ಖರೀದಿ ಮಾಡಿದ್ದರು. ಚಾಲಕ ರವಿಕುಮಾರ್ ಎಂಬವರ ಕಾರಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬಳ್ಳಾರಿ ರಸ್ತೆಯ ವಿಡ್ಸರ್ ಮ್ಯಾನರ್ ವೃತ್ತದಲ್ಲಿ ಕಾರು ರಿಪೇರಿಯಾಗಿದೆ ಎಂದು ಹೇಳಿ ಕೃಷ್ಣೇಗೌಡ ಮತ್ತು ಶಿವಲಿಂಗಯ್ಯ ಎಂಬುವರನ್ನು ಕಾರಿಗೆ ಹತ್ತಿಸಿಕೊಂಡು ಗಾಂಧಿ ಅವರನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದರು.
ಪ್ರಕರಣದ ಸಂಬಂಧ ದಾಖಲಾಗಿದ್ದ ನಾಪತ್ತೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಚಾರ್ಮುಡಿ ಘಾಟ್ನಲ್ಲಿ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅಲ್ಲದೇ, ಆರೋಪಿಗಳನ್ನು ಬಂಧಿಸಿ ಮೂರು ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.