ಬೆಂಗಳೂರು; ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರನ್ನು ಹಾಡಹಗಲೇ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಬೆಂಗಳೂರು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಛಲವಾದಿಪಾಳ್ಯದ ಸ್ಟೀಫನ್, ಅಜಯ್, ಪುರುಷೋತ್ತಮ್ ಬಂಧಿತ ಆರೋಪಿಗಳಾಗಿದ್ದು ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಆರಕ್ಕೇರಿದೆ.
ಆರೋಪಿ ಪುರುಷೋತ್ತಮ್ , ರೇಖಾ ಅವರ ಕೊಲೆಗೂ ಮುನ್ನ ಸಿಸಿಟಿವಿ ತಿರುಗಿಸಿದ್ದ ಎನ್ನಲಾಗಿದ್ದು, ಹಲ್ಲೆ ನಡೆಸುವ ವೇಳೆ ಆ ಸ್ಥಳಕ್ಕೆ ಯಾರಾದರೂ ಬರುತ್ತಾರೆಯೇ ಎಂದು ನಿಗಾ ವಹಿಸಿದ್ದನು.
ಬಂಧಿತ ಸ್ಟೀಫನ್ ಹಾಗೂ ಅಜಯ್ ಹಲ್ಲೆ ನಡೆಸುವ ವೇಳೆ ಯಾರೂ ಹತ್ತಿರ ಸುಳಿಯದಂತೆ ನೋಡಿಕೊಂಡಿದ್ದ. ಪ್ರಕರಣದಲ್ಲಿ ಗುಂಡೇಟು ತಿಂದು ಬಂಧಿತರಾಗಿರುವ ಪೀಟರ್ ಹಾಗೂ ಸೂರ್ಯ ಇಬ್ಬರೂ ರೇಖಾ ಅವರಿಗೆ ಚಾಕುವಿಂದ ಬರ್ಬರವಾಗಿ ಇರಿದು ಕೊಲೆಮಾಡಿದ್ದರು ಎಂದು ಡಿಸಿಪಿ ಡಾ. ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಕೊಲೆ ಸಂಬಂಧ ಮೃತ ರೇಖಾ ಸಂಬಂಧಿ ಸಂಜಯ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗುತ್ತಿದ್ದಂತೆ ಪೊಲೀಸರು ಕಾರ್ಯ ಪ್ರವೃತ್ತರಾಗಿ ನಿನ್ನೆ ಮಧ್ಯಾಹ್ನ ಪೀಟರ್ ಮತ್ತು ಸೂರ್ಯ ನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು.
ಘಟನೆ ಸಂಬಂಧ ಒಟ್ಟು ಆರು ಆರೋಪಿಗಳನ್ನು ಬಂಧಿಸಲಾಗಿದೆ, ಬಂಧಿತ ಸ್ಟೀಫನ್ ಇಡೀ ಪ್ರಕರಣದ ಸಂಚಕೋರನಾಗಿದ್ದು, ಎಲ್ಲ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದ ಎಂದು ಸಂಜೀವ್ ಪಾಟೀಲ್ ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ನಂತರ ಕೋರ್ಟ್ ಎದುರು ಹಾಜರುಪಡಿಸಿ ಮತ್ತೆ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಯನ್ನು ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಸಹೋದರಿ ಮಗ ವಶಕ್ಕೆ: ರೇಖಾ ಕದಿರೇಶ್ ಸಹೋದರಿ ಮಾಲಾ ಎಂಬುವರ ಮಗ ಅರುಳ್ ಎಂಬಾತನನ್ನೂ ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಇದಲ್ಲದೆ ಇತರ 25 ಮಂದಿಯನ್ನು ವಶಕ್ಕೆ ಪಡೆದು ವಿಚರಣೆಗೊಳಪಡಿಸಲಾಗಿದೆ ಎಂದು ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಕದಿರೇಶ್ ಕೊಲೆಯಾದ ನಂತರ ರೇಖಾ ತಮಗೆ ಹಣ ಕೊಡುತ್ತಿಲ್ಲ ಹಾಗೂ ರಾಜಕೀಯವಾಗಿ ಬೆಳೆಯಲು ಬಿಡುತ್ತಿಲ್ಲವೆಂಬ ಕೋಪ ಆರೋಪಿಗಳಿಗೆ ಇತ್ತು.
ಹತ್ಯೆಗೆ ಸಂಚು ರೂಪಿಸಿದ್ದ: ಉಳಿದ ಆರೋಪಿಗಳನ್ನು ಒಟ್ಟಿಗೆ ಸೇರಿಸಿಕೊಂಡು ಪೀಟರ್ ಹತ್ಯೆಗೆ ಸಂಚು ರೂಪಿಸಿ ಕಚೇರಿ ಬಳಿ ಪುಡ್ ಕಿಟ್ ಕೊಡುವುದನ್ನು ಗಮನಿಸಿ ಹೊಂಚು ಹಾಕಿ ಕೊಲೆ ಮಾಡಿದ್ದ ಎಂದರು.
ಕಚೇರಿ ಸಿಸಿಟಿವಿ ಕ್ಯಾಮೆರಾಗಳನ್ನು ತಿರುಗಿಸಿಟ್ಟು ಆರೋಪಿಗಳು ಕೃತ್ಯ ಎಸಗಿದ್ದರು. ಆದರೆ, ಸ್ಥಳೀಯ ನಿವಾಸಿಗಳು ಕೃತ್ಯದ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಖಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ವ್ಯಕ್ತಿಯೊಬ್ಬರು, ಆರೋಪಿಗಳಾದ ಪೀಟರ್ ಹಾಗೂ ಸೂರ್ಯನೇ ಕೃತ್ಯ ಎಸಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು.
ಅದೇ ಸುಳಿವು ಆಧರಿಸಿ ಮೂರು ವಿಶೇಷ ತಂಡಗಳು ಆರೋಪಿಗಳ ಬೆನ್ನತ್ತಿದ್ದವು ಕೃತ್ಯದ ಸ್ಥಳದಿಂದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದ ಆರೋಪಿಗಳು, ಚಾಮರಾಜಪೇಟೆ ಸಮೀಪ ಆಟೋ ಹತ್ತಿ ಎರಡು ಬಾರಿ ಆಟೋ ವನ್ನೂ ಬದಲಿಸಿದ್ದರು.
ಪರಾರಿಗೆ ಸಿದ್ಧತೆ: ಪೀಟರ್, ಸೂರ್ಯನ ಸಹಚರರು ಹಾಗೂ ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದ ಪೊಲೀಸರು, ‘ಆರೋಪಿಗಳು ತಮಿಳುನಾಡಿಗೆ ಪರಾರಿಯಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ’ ಎಂಬ ಮಾಹಿತಿ ಪತ್ತೆ ಹಚ್ಚಿ ಕಾರ್ಯಾಚರಣೆ ನಡೆಸಿದ್ದರು.
ಸುಂಕದಕಟ್ಟೆ ಬಜಾಜ್ ಮೈದಾನದಲ್ಲಿ ಸೇರಿದ್ದ ಆರೋಪಿಗಳು, ಅಲ್ಲಿಯೇ ಮದ್ಯ ಸೇವಿಸಿ ನಂತರ ತಮಿಳುನಾಡಿಗೆ ಹೊರಡಲು ಸಿದ್ಧತೆ ನಡೆಸಿದ್ದರು. ಈ ಸಂಗತಿ ಗೊತ್ತಾಗುತ್ತಿದ್ದಂತೆ ಪೊಲೀಸರ ತಂಡ, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.
ಹಳೆ ಆರೋಪಿಗಳು: ಆರೋಪಿ ಪೀಟರ್, ಮೂರು ಕೊಲೆ ಪ್ರಕರಣಗಳಲ್ಲಿ ಆರೋಪಿ. ಹಲ್ಲೆ ಹಾಗೂ ಎರಡು ಸುಲಿಗೆ ಯತ್ನ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ. ಮತ್ತೊಬ್ಬ ಆರೋಪಿ ಸೂರ್ಯನ ವಿರುದ್ಧ ತಲಾ ಎರಡು ಕೊಲೆ ಹಾಗೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಛಲವಾದಿಪಾಳ್ಯ ಅಂಜನಪ್ಪ ಗಾರ್ಡನ್ ಸುತ್ತಮುತ್ತಲಿನ ಪ್ರದೇಶದಲ್ಲಿ ಗಾಂಜಾ ಮಾರಾಟ ಜಾಲ ಸಕ್ರಿಯವಾಗಿದ್ದು ಜಾಲದಲ್ಲಿ ಸೂರ್ಯ ಹಾಗೂ ಪೀಟರ್ ಕೆಲಸ ಮಾಡುತ್ತಿದ್ದು ಇದರ ವಿರುದ್ಧ ರೇಖಾ ಅವರು ಇತ್ತೀಚೆಗಷ್ಟೇ ದೂರು ನೀಡಿದ್ದರು. ಇದು ಸಹ ಕೊಲೆಗೆ ಕಾರಣವೆಂಬ ಮಾಹಿತಿಯಿದ್ದು ಎಲ್ಲಾ ಆಯಾಮದಲ್ಲೂ ತನಿಖೆ ಮುಂದುವರಿದಿದೆ’ಎಂದು ತಿಳಿಸಿದರು.