Home ರಾಜ್ಯ ಹತ್ಯೆಯನ್ನು ಸಂಭ್ರಮಿಸುವವರು ಮನುಷ್ಯತ್ವ ಇಲ್ಲದ ಮೃಗಗಳು: ದಿನೇಶ್ ಗುಂಡೂರಾವ್

ಹತ್ಯೆಯನ್ನು ಸಂಭ್ರಮಿಸುವವರು ಮನುಷ್ಯತ್ವ ಇಲ್ಲದ ಮೃಗಗಳು: ದಿನೇಶ್ ಗುಂಡೂರಾವ್

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಹತ್ಯೆಯ ವಿರುದ್ಧ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಈ ಹತ್ಯೆಯನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಲೇಬೇಕು. ಧರ್ಮಾಂಧತೆಯ ಅಮಲು ತಲೆಗೇರಿಸಿಕೊಂಡಿರುವ ರಕ್ತಪಿಪಾಸಿಗಳು ಮಾತ್ರ ಇಂತಹ ಹೇಯ ಕೃತ್ಯ ನಡೆಸಲು ಸಾಧ್ಯ. ಈ ಹತ್ಯೆಯನ್ನು ಯಾರೇ ಸಂಭ್ರಮಿಸಿದರೂ ಅವರು ಮನುಷ್ಯತ್ವ ಇಲ್ಲದ ಮೃಗಗಳಿಗೆ ಸಮ. ಅದೇ ರೀತಿ ಪ್ರತಿ ಹತ್ಯೆಯಲ್ಲೂ ರಾಜಕೀಯ ಮಾಡುವವರು ಕೂಡ ಮೃಗಗಳೇ ಆಗಿರುತ್ತಾರೆ’ ಎಂದು ಕಿಡಿ ಕಾರಿದ್ದಾರೆ.

 ‘ಕನ್ಹಯ್ಯ ಹತ್ಯೆಯನ್ನು ಬಿಜೆಪಿ ರಾಜಕೀಯಗೊಳಿಸುತ್ತಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಇರುವ ಕಾರಣ ಹತ್ಯೆಯಾಗಿದೆ ಎಂದು ಬೊಬ್ಬಿಡುತ್ತಿರುವ ಬಿಜೆಪಿ ವರ್ತನೆ ಬಾಲಿಶತನ. ಇತ್ತೀಚೆಗೆ ಶಿವಮೊಗ್ಗದಲ್ಲಿ ಹರ್ಷ ಎಂಬ ಯುವಕನ ಕೊಲೆಯಾಯ್ತು. ಆಗ ರಾಜ್ಯದಲ್ಲಿದಿದ್ದು ಇದೇ ಬಿಜೆಪಿ ಸರ್ಕಾರವಲ್ಲವೆ? ಹರ್ಷನ ಕೊಲೆಯ ಹೊಣೆಗಾರಿಕೆ ಈಗಿನ ಬಿಜೆಪಿ ಸರ್ಕಾರದ್ದೇ’ ಎಂದು ಪ್ರಶ್ನಿಸಿದ್ದಾರೆ.

‘ಧರ್ಮದ ಅಫೀಮ್ ತಿಂದಿರುವ ಕೋಮು ಕ್ರಿಮಿಗಳಿಗೆ ಯಾವುದೇ ಸರ್ಕಾರವಿದ್ದರೂ ಅಂಜಿಕೆಯಿರುವುದಿಲ್ಲ. ಇಂತಹ ಕ್ರಿಮಿಗಳನ್ನು ಯಾವುದೇ ಮುಲಾಜಿಲ್ಲದೆ ಹೆಡೆಮುರಿ ಕಟ್ಟಿ ಹುಟ್ಟಡಗಿಸಬೇಕು. ಮನುಷ್ಯತ್ವ ಮರೆತ ಇಂತಹ ಕ್ರಿಮಿಗಳ ಹುಟ್ಟಡಗಿಸಲು ಯಾರ ತಕರಾರು ಇಲ್ಲ. ಹೀಗಿರುವಾಗ ಬಿಜೆಪಿಯು ಪ್ರತಿ ಹತ್ಯೆಯಲ್ಲೂ ಹೆಣದ ರಾಜಕೀಯ ಮಾಡುವ ಉದ್ದೇಶವೇನು?’ ಎಂದು ಕೇಳಿದ್ದಾರೆ.

‘ಕನ್ಹಯ್ಯರನ್ನು ಹತ್ಯೆ ಮಾಡಿದ ಇಬ್ಬರು ಪಾತಕಿಗಳನ್ನು ರಾಜಸ್ಥಾನ ಸರ್ಕಾರ ಈಗಾಗಲೇ ಬಂಧಿಸಿದೆ. ಈ ಇಬ್ಬರು ಕಿರಾತಕರ ಕೃತ್ಯ ಯಾವ ಭಯೋತ್ಪಾದಕ ಕೃತ್ಯಕ್ಕೂ ಕಡಿಮೆಯಿಲ್ಲ. ರಾಜಸ್ಥಾನ ಸರ್ಕಾರ ಈ ದುಷ್ಟರ ವಿರುದ್ದ ತ್ವರಿತಗತಿಯ ವಿಚಾರಣೆ ನಡೆಸಿ ಉಗ್ರ ಶಿಕ್ಷೆಯಾಗುವಂತೆ ನೋಡಿಕೊಳ್ಳಲಿ. ಈ ಪ್ರಕರಣದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲಿ’ ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.

Join Whatsapp
Exit mobile version