ಇದು ಹಬ್ಬಾಚರಣೆಯಲ್ಲ, ಹಿಂಸಾಚರಣೆ

Prasthutha: May 10, 2022
✍️ಫಯಾಝ್ ದೊಡ್ಡಮನೆ

►ಅಧರ್ಮಗಳು ಧರ್ಮಾಚರಣೆಗಳಾದಾಗ

ಭಾರತ ವಿವಿಧತೆ, ಏಕತೆಯನ್ನು ಸಾರಿದ ದೇಶ. ಹಲವು ಸಂಸ್ಕೃತಿ, ಆಚಾರ-ವಿಚಾರಗಳು, ಭಾಷೆಗಳು ಇದ್ದರೂ ಸಹಬಾಳ್ವೆ, ಭ್ರಾತೃತ್ವಕ್ಕೆ ಹೆಸರುವಾಸಿಯಾಗಿತ್ತು. ಜಗತ್ತಿನ ಬಹುತೇಕ ಎಲ್ಲ ಧರ್ಮಗಳು ಭಾರತದಲ್ಲಿವೆ. ಪ್ರಾಚೀನ ಭಾರತದಲ್ಲಿ ಜಾತೀಯತೆ, ವರ್ಣಾಶ್ರಮ ಪದ್ಧತಿಯಂತಹ ಕ್ರೂರ, ಮಾನವೀಯ ವಿರೋಧಿ ಜೀವನಕ್ರಮಗಳಿದ್ದರೂ, ತದನಂತರ ವಿವಿಧ ಧರ್ಮಗಳ ಆಗಮನದೊಂದಿಗೆ ಹೊಸತನ ಕಂಡುಬಂದಿತ್ತು. ಯಾವುದೇ ಧರ್ಮಗಳು ಆಗಮಿಸಿದರೂ ಬ್ರಾಹ್ಮಣ್ಯದ ಅಸ್ಮಿತೆಗೆ ಪೆಟ್ಟು ಬೀಳುತ್ತಲೇ ಇತ್ತು ಅನ್ನುವುದು ಕೂಡ ಸತ್ಯ. ಹಲವು ಧರ್ಮಗಳಿದ್ದರೂ ಸಹೋದರತೆಯ ಭಾವನೆ ಕೂಡ ದಟ್ಟವಾಗಿಯೇ ಇತ್ತು. ಹಬ್ಬ-ಉತ್ಸವಗಳು ಭಾವೈಕ್ಯತೆಯ ಕೇಂದ್ರವಾಗಿ ಜನರನ್ನು ಬೆಸೆಯುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಹಿಂದೂ ಧಾರ್ಮಿಕ ಹಬ್ಬಗಳು ದ್ವೇಷ ಹರಡುವ, ಹಿಂಸೆಗೆ ಪ್ರಚೋದನೆ ನೀಡುವ ಹಬ್ಬಗಳಾಗಿ ಪರಿವರ್ತನೆಯಾಗಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹಿಂದೂ ಧಾರ್ಮಿಕ ಹಬ್ಬಗಳಲ್ಲಿ ಬಹಿರಂಗವಾಗಿಯೇ ಜನರನ್ನು ವಿಭಜಿಸುವ ಕರೆ ನೀಡುತ್ತಲೇ ಮುಸ್ಲಿಮರ ನರಹತ್ಯೆಗೆ ಪ್ರೇರೇಪಿಸಲಾಗುತ್ತಿದೆ. ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ರ್ಯಾಲಿಗಳು, ಯಾತ್ರೆಗಳು ಆಯುಧ ಪ್ರದರ್ಶನದ ವೇದಿಕೆಗಳಾಗುತ್ತಿವೆ.

ಕೆಲವು ದಿನಗಳ ಹಿಂದೆ ನಡೆದ ರಾಮನವಮಿ, ಹನುಮ ಜಯಂತಿಯ ಆಚರಣೆಗಳು ಬಹಿರಂಗ ಹಿಂಸಾಚಾರಕ್ಕೆ ಕಾರಣವಾದವು. ರಾಮನವಮಿಯ ಆಚರಣೆಯಲ್ಲಿ ರ್ಯಾಲಿಗಳ ಆರ್ಭಟವೇ ಹೆಚ್ಚಾಗಿದ್ದವು. ಹೆಚ್ಚಿನ ರ್ಯಾಲಿಗಳು ಹಿಂಸಾತ್ಮಕ ಕೃತ್ಯಗಳಲ್ಲಿ ಸಮಾಪ್ತಿಯಾಗಿವೆ. ಭಾರತದ ಸುಮಾರು 9 ರಾಜ್ಯಗಳಲ್ಲಿ ಹಲವಾರು ಹಿಂಸಾಕೃತ್ಯಗಳು ಮುಸ್ಲಿಮರನ್ನು ಅಕ್ಷರಶಃ ಗುರಿಯಾಗಿಸಿದ್ದವು. ಕೇವಲ 15 ದಿನಗಳ ಅಂತರದಲ್ಲಿ ದೇಶದ ಕಾನೂನು ಸುವ್ಯವಸ್ಥೆಯ ವಾಸ್ತವ ಸ್ಥಿತಿ ಜಗತ್ತಿನ ಮುಂದೆ ಬಹಿರಂಗವಾಯಿತು. ಕೇವಲ ರಾಮನವಮಿಯಂದೇ ಸುಮಾರು 9 ರಾಜ್ಯಗಳಲ್ಲಿ 10ಕ್ಕಿಂತಲೂ ಹೆಚ್ಚು ಹಿಂಸಾಕೃತ್ಯಗಳು ನಡೆದವು.

ಯಾಕೆ ಈ ರೀತಿ ಘಟಿಸಿತು?

ರಾಮನವಮಿ ಹಿಂದೂ ಧಾರ್ಮಿಕ ಆಚರಣೆಯಾದರೂ ಸಂಘಪರಿವಾರ ಇದರ ಮೇಲುಸ್ತುವಾರಿ ವಹಿಸಿ ನಡೆಸಿರುವುದೇ ಹೀಗೆ ಘಟಿಸಲು ಕಾರಣ. ಹಿಂದೂ ಧರ್ಮದ ಎಲ್ಲಾ ಧಾರ್ಮಿಕ ಪೂಜೆ-ಪುನಸ್ಕಾರ, ಹಬ್ಬಗಳು, ಆಚರಣೆಗಳು ಆರೆಸ್ಸೆಸ್ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಕೇವಲ ದೇವಸ್ಥಾನಗಳಲ್ಲಿ ಪೂಜೆಗೆ ಸೀಮಿತವಾಗಿದ್ದ  ಹಬ್ಬಗಳು ಬೀದಿಗೆ ಬಂದು ವರ್ಷಗಳೇ ಕಳೆದಿವೆ. ಗಣೇಶ ಚತುರ್ಥಿಯ ಮೂಲಕ (ಬ್ರಾಹ್ಮಣ್ಯದ ಗೋಡೆಯನ್ನು ಕೆಡವಿದಂತೆ ನಟಿಸಿ) ಹಿಂದೂ ಐಕ್ಯತೆಯ ಸೋಗಿನಲ್ಲಿ ಕೋಮುದ್ವೇಷಗಳನ್ನು ಬಿತ್ತಲಾಯಿತು. ಅದರ ಫಲವತ್ತತೆಯನ್ನು ಅರಿತ ಸಂಘಪರಿವಾರ ಮುಂದೆ ಎಲ್ಲಾ ಧಾರ್ಮಿಕ ಹಬ್ಬಗಳನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಬಜರಂಗದಳ-ವಿಎಚ್‌ ಪಿಯಂತಹ ಗೂಂಡಾ ಸಂಘಟನೆಗಳ ಮೂಲಕ ಶುಭಾಶಯ ಕೋರುವ ಬ್ಯಾನರ್-ಫ್ಲೆಕ್ಸ್  ಗಳು ಹಾಕಿ ಈ ಮೂಲಕ ನುಸುಳಿದ ಆರೆಸ್ಸೆಸ್, ಮುಂದೆ ಈ ಸಂಘಟನೆಗಳನ್ನು ದೇವಸ್ಥಾನಗಳ ಅಧಿಕೃತ ಸಂಘಟನೆಗಳಾಗಿಸುವಲ್ಲಿ ಯಶಸ್ವಿಯಾಯಿತು. ಆಡಳಿತ ಮೊಕ್ತೇಸರರು, ಆಡಳಿತ ಮಂಡಳಿಗಳಿಗಿಂತಲೂ ಹೆಚ್ಚಿನ ಪ್ರಾಬಲ್ಯ ಈ ಸಂಘಪರಿವಾರದ ಗೂಂಡಾ ಪಡೆಗಳಿಗೆ ದೇಗುಲಗಳಲ್ಲಿ ದೊರಕಲು ಆರಂಭವಾಯಿತು. ಹೊಸ ತಲೆಮಾರಿನ ಹಿಂದೂ ಯುವ ಸಮೂಹ ಬಜರಂಗದಳ, ವಿಎಚ್‌ಪಿಗಳು ಹಿಂದೂ ಧರ್ಮದ ಅಧಿಕೃತ ಸಂಘಟನೆಗಳೆಂದೇ ನಂಬುವಂತಾಗಿದ್ದು ಇವುಗಳನ್ನು ದೇವಸ್ಥಾನಗಳಲ್ಲಿ ನೋಡುವ ಮೂಲಕ. ಬರಬರುತ್ತಾ ಎಲ್ಲಾ ಧಾರ್ಮಿಕ ಹಬ್ಬಗಳಿಗೂ ರ್ಯಾಲಿಗಳನ್ನು ಸೇರಿಸಲಾಯಿತು, ನಂತರ ಆಯುಧಗಳ ಪ್ರದರ್ಶನ ನುಸುಳಿತು, ಮುಸ್ಲಿಮ್ ವಿರೋಧಿ ಘೋಷಣೆಗಳು ಆರಂಭವಾದವು, ಇಂದು ಮುಸ್ಲಿಮ್ ವಿರೋಧಿ ಹಿಂಸಾಕೃತ್ಯಗಳೆಡೆಗೆ ಬಂದು ನಿಂತಿದೆ. ರಾಮನವಮಿಯಂದು ರಾಮನನ್ನು ಕೂಗುವುದೋ, ಹನುಮ ಜಯಂತಿಯಂದು ಹನುಮ ಶ್ಲೋಕಗಳೇ ಕಾಣದಾಗಿ ಮುಸ್ಲಿಮ್ ಮತ್ತು ಇಸ್ಲಾಂ ವಿರೋಧಿ ಘೋಷಣೆಗಳೇ ವಿಜೃಂಭಿಸುತ್ತಿವೆ. ಇವೆಲ್ಲವೂ ತಮ್ಮ ಪೂಜೆಯ ಭಾಗವೆಂದೇ ನಂಬಿರುವ ಯುವ ಜನಾಂಗ, ವಿಶೇಷವಾಗಿ ಹಿಂದುಳಿದ ಜಾತಿಯ ಯುವಜನರು ಸಮೂಹಸನ್ನಿಗಳಾಗಿ ವರ್ತಿಸುತ್ತಿದ್ದಾರೆ.

ಸ್ವರೂಪ

ಕರ್ನಾಟಕ, ಮಧ್ಯಪ್ರದೇಶ, ಗುಜರಾತ್, ಬಿಹಾರ, ಉತ್ತರ ಪ್ರದೇಶ, ಪಶ್ಚಿಮಬಂಗಾಳ, ಗೋವಾ ಮುಂತಾದ ರಾಜ್ಯಗಳ ಹಲವು ಪ್ರದೇಶಗಳಲ್ಲಿ ರಾಮನವಮಿಯಂದು, ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಹನುಮ ಜಯಂತಿಯಂದು ಜರಗಿದ ಎಲ್ಲಾ ಹಿಂಸಾಚಾರಗಳು ಮುಸ್ಲಿಮರನ್ನೇ ಗುರಿಯಾಗಿಸಿದ್ದವು. ಮುಸ್ಲಿಮ್ ಗಲ್ಲಿಗಳಲ್ಲಿ ದುರುದ್ದೇಶ ಇಟ್ಟುಕೊಂಡು ಬರುತ್ತಿದ್ದ ರ್ಯಾಲಿಗಳು ಮಸೀದಿಗಳ ಮುಂದೆ ನಿಲ್ಲುತ್ತಿದ್ದವು. ಬಜರಂಗದಳ, ವಿಎಚ್‌ ಪಿ, ಬಿಜೆಪಿ ಮತ್ತು ಆರೆಸ್ಸೆಸ್ ಇತರ ಸಂಘಟನೆಗಳ ನಾಯಕರು ಈ ಮೊದಲೇ ನೀಡಿದ ಬಹಿರಂಗ ಪ್ರಚೋದನೆಯಿಂದ ಉನ್ಮಾದಗೊಂಡ ಯುವಕರು ಆಝಾನ್ ವಿರುದ್ಧ ತಮ್ಮ ‘ಧರ್ಮ ಹೋರಾಟ’ದ ಹೆಸರಿನಲ್ಲಿ ಹುಚ್ಚೆದ್ದು ಕುಣಿಯುತ್ತಾರೆ. ಯಾವುದೇ ಪ್ರಚೋದನೆಗೂ ಮುಸ್ಲಿಮ್ ಸಮುದಾಯ, ಪ್ರತಿಕ್ರಿಯೆ ನೀಡದಾದಾಗ ಸಂಘಪರಿವಾರದ ಕಾರ್ಯಕರ್ತರೇ ಮಸೀದಿಗಳ ಒಳಗೆ ನುಗ್ಗಿ, ತಮ್ಮದೇ ರ್ಯಾಲಿಗಳಿಗೆ ಕಲ್ಲೆಸೆಯುತ್ತಿರುವ ಘಟನೆಗಳು ನಡೆದಿವೆ. ಇದನ್ನೇ ನೆಪವಾಗಿಸಿ ಮುಸ್ಲಿಮರ ಮೇಲೆ ಆಕ್ರಮಣಗೈಯ್ಯುವ ಈ ಗೂಂಡಾ ಪಡೆಗಳು ಮುಸ್ಲಿಮರ ಮನೆ, ಆಸ್ತಿ, ಪಾಸ್ತಿ, ಅಂಗಡಿ ಮುಂಗಟ್ಟುಗಳನ್ನು  ಮನಸೋ ಇಚ್ಛೆ ನಾಶಗೈಯ್ಯುತ್ತಾರೆ. ಕೊನೆಗೆ ತಾವು ರಾಮನ ತೃಪ್ತಿಗೊಳಿಸಿದೆವು ಎಂಬಂತೆ ಫೋಸು ಕೊಡುತ್ತಾ, ಬಡಾಯಿ ಕೊಚ್ಚುತ್ತಾ ವೀರರಂತೆ ಬಿಂಬಿಸಲ್ಪಡುತ್ತಾರೆ. ಇದು ಈ ವರ್ಷದ ರಾಮನವಮಿಯ ದಿನದಂದು ನಡೆದ ಎಲ್ಲಾ ಘಟನೆಗಳ ಮಾದರಿ.

ಮುಂದೇನು?

ದುರದೃಷ್ಟವಶಾತ್, ಪೊಲೀಸ್ ಇಲಾಖೆ ಕೂಡ ಈ ಕೃತ್ಯಗಳ ಬಗ್ಗೆ ಮೂಕಪ್ರೇಕ್ಷಕರಂತೆ ವರ್ತಿಸುತ್ತಿದೆ. ತಮ್ಮ ಮುಂದೆಯೇ ಇಷ್ಟೆಲ್ಲಾ  ನಡೆಯುತ್ತಿದ್ದರೂ ‘ತಮಗೂ ಇದೇ ಬೇಕಿತ್ತು’ ಎಂಬಂತೆ ಕೈಕಟ್ಟಿ ಕೂರುತ್ತಾರೆ ಅಥವಾ ತಾವು ಒಂದೆರೆಡು ಕಲ್ಲು ಬಿಸಾಕಿ ತಮ್ಮ ಮನಸ್ಸುಗಳನ್ನು ತೃಪ್ತಿಗೊಳಿಸಿಕೊಳ್ಳುತ್ತಾರೆ.

ಮುಂದಿನ ಹಿಂಸಾಕೃತ್ಯಕ್ಕೆ ಮುಸ್ಲಿಮರನ್ನು ಆರೋಪಿಗಳನ್ನಾಗಿಸಿ, ಸ್ಥಳೀಯ ಸರಕಾರಿ ಸಂಸ್ಥೆಗಳು ಬುಲ್ಡೋಜರ್‌ ಗಳ ಮೂಲಕ ಅಳಿದುಳಿದ ಮನೆಗಳನ್ನು ಧರೆಗುರುಳಿಸುತ್ತಿವೆ. ಇದು ಕೂಡ ಆರೆಸ್ಸೆಸ್ ಪ್ರಾಯೋಜಿತ ತಂತ್ರದ ಭಾಗವೇ ಆಗಿರುತ್ತದೆ. ಸರಕಾರಿ ಯಂತ್ರದ ಮೂಲಕ ಮುಸ್ಲಿಮರ ವಂಶಹತ್ಯೆ ಬಹಳ ರಾಜಾರೋಷವಾಗಿ ನಡೆಯುತ್ತದೆ. ಇದರ ಜೊತೆಗೆ ಮುಸ್ಲಿಮರ ಮನೆಗಳ ಮೇಲೆ ಪೊಲೀಸ್ ದಾಳಿಗಳಾಗಿ ಸಾವಿರಾರು ಯುವಕರು ಜೈಲುಪಾಲಾಗುತ್ತಾರೆ.

ಈ ಸಂದರ್ಭಗಳಲ್ಲಿ ಮಾಧ್ಯಮಗಳು ಕೂಡ ಆರೆಸ್ಸೆಸ್ ಮತ್ತು ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಸಹಕಾರ ನೀಡುತ್ತಾ, ಉಳಿದೆಡೆಗೆ ಸುಳ್ಳು ಸುದ್ದಿಗಳನ್ನು ಬಿತ್ತರಿಸಿ, ಮುಸ್ಲಿಮರ ತೇಜೋವಧೆಗಿಳಿಯುತ್ತವೆ. ಸತ್ಯ, ವರದಿಗಾರಿಕೆ ಎನ್ನುವುದೆಲ್ಲಾ ಈಗ ಇತಿಹಾಸ ಮಾತ್ರ. ಕೇವಲ ಬೊಬ್ಬೆರೆಯುವ ಮಾತಿನ ಉಗ್ರರಂತೆ ವರ್ತಿಸುವ ಮಾಧ್ಯಮಗಳ ನಿರೂಪಕರು, ಒಟ್ಟಾರೆ ಸಮಾಜದ ಸ್ವಾಸ್ಥ್ಯ ಕೆಡಿಸುವಲ್ಲಿ ಮತ್ತು ಆರೆಸ್ಸೆಸ್ಸ್‌ನ ವಂಶಹತ್ಯೆಗೆ ಸಹಕಾರ ನೀಡುತ್ತಲೇ ಇದ್ದಾರೆ. ಸಂತ್ರಸ್ತರ ಗೋಳಿಗಿಂತಲೂ ಕಾಲ್ಪನಿಕ ಕಥೆಗಳೇ ವಿಜೃಂಭಿಸಿ ರಾಮನವಮಿಯ ಹೆಸರಿನ ಹಿಂಸಾಚಾರದ ಒಟ್ಟಾರೆ ಪ್ಯಾಕೇಜ್‌ ನಲ್ಲಿ ತನ್ನ ಭಾಗೀದಾರಿಕೆಯನ್ನು ಖಾತರಿಪಡಿಸುತ್ತದೆ.

ಹಿಂದಿರುವ ಉದ್ದೇಶ

ಜೆನೋಸೈಡ್ ವಾಚ್ ಎಂಬ ಅಂತಾರಾಷ್ಟ್ರೀಯ ಸಂಸ್ಥೆಯು ಭಾರತದಲ್ಲಿ ಸಂಭಾವ್ಯ ವಂಶಹತ್ಯೆಯ ಮುನ್ಸೂಚನೆಯನ್ನು ನೀಡಿದೆ. ಈ ಹಿಂದೆ ರುವಾಂಡದಲ್ಲಿ ನಡೆದ ನರಮೇಧದ ಬಗೆಗೂ ಮುನ್ನೆಚ್ಚರಿಕೆ ನೀಡಿದ್ದ ಈ ಸಂಸ್ಥೆ ಭಾರತದ ಈಗಿನ ಸ್ಥಿತಿಗತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಧಾರ್ಮಿಕ ಆಚರಣೆಗಳಲ್ಲಿ ನಡೆಯುತ್ತಿರುವ ಹಿಂಸಾಚಾರಗಳು ಈ ವಂಶಹತ್ಯೆಯ ಭಾಗಗಳೇ ಆಗಿವೆ.

ಜೆನೋಸೈಡ್ ವಾಚ್ ಸಂಸ್ಥೆಯ ಪ್ರಕಾರ, ನರಮೇಧ ಕೇವಲ ಘಟನೆಗಳಲ್ಲ. ಬದಲಾಗಿ ಅದೊಂದು ಪ್ರಕ್ರಿಯೆ. ರಾಮನವಮಿ ಮತ್ತು ಹನುಮಜಯಂತಿಯ ಹೆಸರಿನಲ್ಲಿ ಹಿಂಸಾಚಾರಗಳು ಕೂಡ ವಂಶಹತ್ಯೆಯ ಪ್ರಕ್ರಿಯೆಗಳೇ ಆಗಿವೆ. ಇಂದು 10ಕ್ಕೂ ಹೆಚ್ಚು ಘಟನೆಗಳು ನಡೆದರೆ, ಮುಂದೆ ಇನ್ಯಾವುದೋ ಹೆಸರಿನಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ನಿರಂತರವಾಗಿ ನಡೆಯಲಿದೆ. ಧಾರ್ಮಿಕ ಹಬ್ಬಗಳನ್ನು ಆರೆಸ್ಸೆಸ್ ಹಬ್ಬವಾಗಿ ಆಚರಿಸಲು ಇರುವ ಪ್ರಮುಖ ಕಾರಣವೇ ಈ ನರಮೇಧಕ್ಕೆ ಜನರನ್ನು ಒಗ್ಗೂಡಿಸುವ ಕೆಲಸ.

ಹಬ್ಬಗಳ ಹೆಸರಿನಲ್ಲಿ ಯುವ ಜನಾಂಗವನ್ನು ಹುಚ್ಚೆಬ್ಬಿಸಿ ಮುಸ್ಲಿಮರ ನರಮೇಧಕ್ಕೆ ಉದ್ರೇಕಿಸಲಾಗುತ್ತಿದೆ. ನಂತರ ಸರ್ಕಾರಗಳು ಕೂಡ ಇದನ್ನು ಬೆಂಬಲಿಸುತ್ತವೆ. ಅಪರಾಧಿಗಳು ವೀರರಾಗಿ ಸಮಾಜದಲ್ಲಿ ಸ್ಥಾನ ಪಡೆಯುತ್ತಾರೆ ಮತ್ತು ಬಹಿರಂಗವಾಗಿ ಸನ್ಮಾನಿಸಲ್ಪಡುತ್ತಾರೆ. ಆದರೆ ದಾಖಲೆಗಳಲ್ಲಿ ಎಲ್ಲೂ ಈ ಬಗ್ಗೆ ಪ್ರಸ್ತಾಪವಿರಲಾರದು. ಇದು ನರಮೇಧದ ವಿವಿಧ ಹಂತಗಳ ಬಗ್ಗೆ ಜೆನೋಸೈಡ್ ವಾಚ್ ಸಂಸ್ಥೆಯ ಸಂಶೋಧನೆಯಲ್ಲಿ ಕಂಡುಬಂದ ಸತ್ಯಗಳು ಮತ್ತು ಪ್ರಸಕ್ತ ಭಾರತದಲ್ಲಿ ಇದೇ ಘಟನೆಗಳು ಸಂಭವಿಸುತ್ತಿರುವುದು.

ಧಾರ್ಮಿಕ ಹಬ್ಬಗಳು ಮುಸ್ಲಿಮರ ವಿರುದ್ಧದ ಆಯುಧಗಳಾಗಿ ಬದಲಾಗಿರುವುದು ದೇಶದ ಒಟ್ಟಾರೆ ಮೂಲಸತ್ವಕ್ಕೆ ವಿರುದ್ಧವಾದ ಮಾನಸಿಕತೆ. ಧರ್ಮ ಮತ್ತು ಧಾರ್ಮಿಕ ಆಚರಣೆಗಳ ಬಗ್ಗೆ ಸರಿಯಾದ ಜ್ಞಾನದ ಕೊರತೆಗಳು ಮತ್ತು ಸಂಘಪರಿವಾರದ ತತ್ವಗಳೇ ಧರ್ಮದ ತಿರುಳಾಗಿ ಪರಿವರ್ತನೆಯಾಗಿರುವುದು ಇದರ ಮೂಲ ಕಾರಣ. ಲಗಾಯ್ತಿನಿಂದಲೂ ಬ್ರಾಹ್ಮಣ್ಯದಿಂದ ನಲುಗಿದ ಕೆಳವರ್ಗದ ಹಿಂದುಳಿದ ಜಾತಿಗಳ ಯುವಕರೇ ಧರ್ಮರಕ್ಷಕರಾಗಿ ಬದಲಾಗಿ ತಮ್ಮದಲ್ಲದ ‘ಶತ್ರುವಿನ ವಿರುದ್ಧ ಹೋರಾಟ’ ಎಂದು ಭಾವಿಸಿರುವುದು ಸಂಘದ ಮೊದಲ ಗೆಲುವೇ ಆಗಿದೆ. ಜಾತೀಯತೆಯಿಂದ ನಲುಗಿದ, ಮಹಿಳೆಯರನ್ನು ಲೈಂಗಿಕ ಶೋಷಣೆ ಮಾಡಿದ ಬ್ರಾಹ್ಮಣ್ಯದ ವಿರುದ್ಧ ವಿಮೋಚನಾ ಹೋರಾಟ ಮಾಡಬೇಕಾದ ಸಮುದಾಯಗಳು ತಮ್ಮ ಸ್ವಾತಂತ್ರ್ಯ ಮತ್ತು ಗೌರವದ ಬದುಕಿಗೆ ಕಾರಣರಾದ ಮುಸ್ಲಿಮರನೇ ಶತ್ರುವೆಂದು ಭಾವಿಸಿರುವುದು ತಮ್ಮ ಧಾರ್ಮಿಕ ದಿವಾಳಿತನ ಎಂದೇ ತಿಳಿಯಬೇಕಾಗಿದೆ.

ತಮ್ಮ ಬುದ್ಧಿಯನ್ನೇ ಸಂಘಕ್ಕೆ ಅಡವಿಟ್ಟ ಯುವಜನಾಂಗ, ಧರ್ಮ ಮತ್ತು ಧರ್ಮದ ಆಚರಣೆಗಳೇನು? ಎಂಬ ಕನಿಷ್ಠ ಜ್ಞಾನವನ್ನು ಹೊಂದಿಲ್ಲದಿರುವುದೇ ಅಧರ್ಮದ ಹಿಂಸಾಕೃತ್ಯಗಳಿಗೆ ಕಾರಣವಾಗುತ್ತದೆ. ಬಡವನ ಜೀವನೋಪಾಯ ಕಸಿಯುವುದು, ಮಹಿಳೆಯರ ಮೇಲೆ ದೌರ್ಜನ್ಯವೆಸಗುವುದು, ಪರಧರ್ಮದ ನಂಬಿಕೆಗಳಿಗೆ ಧಕ್ಕೆ ತರುವುದು ಮುಂತಾದ ಅಧರ್ಮದ ಕೆಲಸಗಳು ತಮ್ಮ ಧರ್ಮವನ್ನು ರಕ್ಷಿಸುತ್ತದೆ ಎಂಬ ಭ್ರಮಾಲೋಕ ಕುಸಿಯಬೇಕಾಗಿದೆ.

ದೇಗುಲಗಳನ್ನು ಸರಿಯಾಗಿ ನೋಡದ (ಅವರಿಗೆ ಧರ್ಮದಲ್ಲಿ ಅವಕಾಶವಿಲ್ಲ) ಧರ್ಮ ರಕ್ಷಣೆಗಿಳಿಯುವಂತೆ ಮಾಡಿದ ಬ್ರಾಹ್ಮಣ್ಯ ಅಥವಾ ಆರೆಸ್ಸೆಸ್, ಧಾರ್ಮಿಕ ಭಾವನೆಯನ್ನು ಗೌರವಿಸಲು ಅಲ್ಪಸಂಖ್ಯಾತರ ತಮ್ಮ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳನ್ನು ಕಳೆದುಕೊಳ್ಳಬೇಕಾಗಿರುವುದು ಈ ದೇಶದ ದುರಂತ. ಸರ್ವಧರ್ಮ ಸಹಿಷ್ಣುವಾಗಿದ್ದ ದೇಶ, ಬಹುಸಂಖ್ಯಾತರ ಅಧರ್ಮಕ್ಕೆ ಬಲಿಯಾಗುತ್ತಿರುವುದು ಕೇವಲ ದೇಶಕ್ಕೆ ಬಹುತ್ವಕ್ಕೆ ಮಾತ್ರ ಅಲ್ಲ, ಪ್ರತಿಯೊಬ್ಬ ನಾಗರಿಕರ ಅಸ್ಮಿತೆಗೂ ಧಕ್ಕೆಯಾಗಲಿದೆ. ಧರ್ಮದ ಹೆಸರಿನ ಬಹುಸಂಖ್ಯಾತರ ಅಧರ್ಮಗಳಿಗೆ ಬಲಿಯಾಗುತ್ತಿರುವ ದೇಶವನ್ನು ವಿವಿಧ ಧರ್ಮಗಳ ಒಗ್ಗೂಡಿದ ಹೋರಾಟ ಮತ್ತು ಬ್ರಾಹ್ಮಣ್ಯದ ವಿರುದ್ಧ ನಲುಗಿದ ಸಮುದಾಯಗಳ ಜಾಗೃತ ಮನಸ್ಸುಗಳು ವಿಮೋಚನೆಯ ಹೋರಾಟದಿಂದ ಎದುರಿಸಬೇಕಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ