ಸದನದಲ್ಲಿ ಹೀಗೊಂದು ಪಂಚೆ ಪ್ರಸಂಗ !

Prasthutha|

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿ ಜನಪ್ರತಿನಿಧಿಗಳು ರಾಜ್ಯದಲ್ಲಿ ನಡೆಯುತ್ತಿರುವ ಸಾಕಷ್ಟು ಗಂಭೀರ ವಿಚಾರಗಳ ಬಗ್ಗೆ ವಾದ ಪ್ರತಿವಾದ ನಡೆಯುತ್ತದೆ. ಆದರೆ ಇಂದು ನಡೆದ ಕಲಾಪವು ಮಾತ್ರ ಹಾಸ್ಯಪ್ರಸಂಗವೊಂದಕ್ಕೆ ನಡೆದಿದೆ.
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಗಂಭೀರವಾಗಿ ಚರ್ಚೆ ಮಾಡುತ್ತಿರುವಾಗ ಅವರ ಪಂಚೆ ಕಳಚಿ ಅಲ್ಪ ಕೆಳಗೆ ಜಾರಿದೆ. ಕೂಡಲೇ ತಮ್ಮ ಸೀಟಿನಿಂದ ಎದ್ದು ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಂಚೆ ಕಳಚಿರುವ ಬಗ್ಗೆ ಸಿದ್ದರಾಮಯ್ಯಗೆ ಕಿವಿಯಲ್ಲಿ ಗುಟ್ಟಾಗಿ ಹೇಳಿದರು.


ತಕ್ಷಣ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಕುಳಿತುಕೊಂಡು ಪಂಚೆ ಸರಿಪಡಿಸುತ್ತಾ, ನನ್ನ ಪಂಚೆ ಜಾರಿದೆ, ಇತ್ತೀಚೆಗೆ ಹೊಟ್ಟೆ ದಪ್ಪ ಆಗಿದ್ದರಿಂದ ಪಂಚೆ ಸರಿಯಾಗಿ ನಿಲ್ಲುತ್ತಿಲ್ಲ, ಪಂಚೆ ಸರಿಪಡಿಸಿದ ಬಳಿಕ ಮಾತು ಮುಂದುವರಿಸುತ್ತೇನೆ ಎಂದು ಬಹಿರಂಗವಾಗಿಯೇ ಹೇಳಿದರು. ಆಗ ಸದನ ನಗುಗಡಲಲ್ಲಿ ತೇಲಿತು.

- Advertisement -

ಪಂಚೆ ಸರಿಪಡಿಸಲು ಸಹಾಯಕ್ಕೆ ಬರಲೇ ಎಂದು ಕೆ.ಎಸ್.ಈಶ್ವರಪ್ಪ ಕಾಲೆಳೆದರು.

ಮಧ್ಯಪ್ರವೇಶಿಸಿದ ರಮೇಶ್ ಕುಮಾರ್ , ನಮ್ಮ ಪಕ್ಷದ ಅಧ್ಯಕ್ಷರು ಪಕ್ಷದ ಗೌರವ ಕಾಪಾಡಲು ಪಂಚೆಯ ವಿಷಯವನ್ನು ಗುಟ್ಟಾಗಿ ಹೇಳಿದ್ದಾರೆ, ಆದರೆ ನೀವು ಮಾತ್ರ ಇಡೀ ಊರೆಲ್ಲಾ ಕೇಳುವಂತೆ ಜೋರಾಗಿ ಹೇಳುವ ಮೂಲಕ ಅವರ ಪ್ರಯತ್ನ ವ್ಯರ್ಥ ಮಾಡಿದಿರಲ್ಲಾ ಎಂದಾಗ ಸದಸ್ಯರು ಬಿದ್ದು ಬಿದ್ದು ನಕ್ಕರು.

- Advertisement -