Home ಟಾಪ್ ಸುದ್ದಿಗಳು ಈ ದೇಶ ಯಾವುದೇ ಒಂದು ಧರ್ಮದವರದ್ದಲ್ಲ. ಸ್ವಾತಂತ್ರ್ಯಕ್ಕಾಗಿ ಎಲ್ಲ ಧರ್ಮಗಳ ಜನರು ಹೋರಾಡಿದ್ದಾರೆ: ಸಿದ್ದರಾಮಯ್ಯ

ಈ ದೇಶ ಯಾವುದೇ ಒಂದು ಧರ್ಮದವರದ್ದಲ್ಲ. ಸ್ವಾತಂತ್ರ್ಯಕ್ಕಾಗಿ ಎಲ್ಲ ಧರ್ಮಗಳ ಜನರು ಹೋರಾಡಿದ್ದಾರೆ: ಸಿದ್ದರಾಮಯ್ಯ

ಚಾಮರಾಜನಗರ: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ಹಾಗೂ ರಾಜ್ಯ ಸರ್ಕಾರದ 40 ಪರ್ಸೆಂಟ್ ಕಮಿಷನ್ ಹಗರಣದ ವಿರುದ್ಧ ಚಾಮರಾಜನಗರದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತಿಭಟನೆ ಹಮ್ಮಿಕೊಂಡಿತ್ತು. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಭಾಗವಹಿಸಿ, ಮಾತನಾಡಿ, ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಮುಂಬರುವ ದಿನಗಳಲ್ಲಿ ವಿಧಾನಸಭಾ ಕೇಂದ್ರದಲ್ಲೂ ಇದೇ ರೀತಿಯ ಪ್ರತಿಭಟನಾ ಸಭೆಗಳನ್ನು ನಡೆಸಬೇಕು ಎಂಬ ಚಿಂತನೆ ಮಾಡಿದ್ದೇವೆ. ಕೇಂದ್ರ ಮತ್ತು ರಾಜ್ಯದಲ್ಲಿ ಅತ್ಯಂತ ಭ್ರಷ್ಟ ಸರ್ಕಾರ ಆಡಳಿತದಲ್ಲಿದೆ. ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲಿ ಇಷ್ಟು ಕೆಟ್ಟ, ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡಿರುವ, ದೇಶದಲ್ಲಿ ದ್ವೇಷದ ವಿಷಬೀಜ ಬಿತ್ತುವ ಸರ್ಕಾರವನ್ನು ನೋಡಿಯೇ ಇಲ್ಲ. ಈ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಜನ, ಅಧಿಕಾರಿಗಳು ಮಾತನಾಡುತ್ತಾ ಇದ್ದಾರೆ ಎಂದು ಹೇಳಿದರು.

ರಾಜ್ಯ ಗುತ್ತಿಗೆದಾರರ ಸಂಘದವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಕರ್ನಾಟಕದ ಯಾವುದೇ ಸರ್ಕಾರಿ ಕಾಮಗಾರಿಗೆ ನಾವು 40% ಕಮಿಷನ್ ನೀಡಬೇಕು, ಈ 40% ಕಮಿಷನ್ ಕೊಟ್ಟು ನಮ್ಮಿಂದ ಗುಣಮಟ್ಟದ ಕೆಲಸ ಮಾಡಲು ಸಾಧ್ಯವಿಲ್ಲ. ಕಮಿಷನ್ ಗಾಗಿ ಈ ಸರ್ಕಾರ ನಮಗೆ ಕಿರುಕುಳ, ಹಿಂಸೆ ಕೊಡುತ್ತಿದೆ, ದಯಮಾಡಿ ಇದನ್ನು ತಪ್ಪಿಸಿ ಎಂದು ಮನವಿ ಮಾಡಿದ್ದಾರೆ. ಕೆಂಪಣ್ಣನವರು ಬರೆದ ಈ ಪತ್ರ ನನ್ನ ಬಳಿಯೂ ಇದೆ, ಎಲ್ಲಾ ಪತ್ರಿಕೆಗಳಲ್ಲಿ ವರದಿ ಕೂಡ ಆಗಿದೆ. ಈ ರೀತಿ ಗುತ್ತಿಗೆದಾರರ ಸಂಘದವರು ಸರ್ಕಾರದ ವಿರುದ್ಧ ಲಂಚದ ಆರೋಪ ಮಾಡಿ ಪ್ರಧಾನಿಗಳಿಗೆ ಪತ್ರ ಬರೆದಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಸಿದ್ದರಾಮಯ್ಯ ಕಿಡಿಕಾರಿದರು.


ನರೇಂದ್ರ ಮೋದಿ ಅವರು ತಮ್ಮನ್ನು ಚೌಕಿದಾರ ಎಂದು ಕರೆದುಕೊಂಡಿದ್ದರು, ನಾ ಖಾವೂಂಗಾ, ನಾ ಖಾನೇದೂಂಗ ಎಂದಿದ್ದರು. ಈಗ ಒಂಭತ್ತು ತಿಂಗಳು ಆಗಿದೆ, ಆದರೂ ಪತ್ರದ ಬಗ್ಗೆ ಯಾವ ಕ್ರಮ ಕೈಗೊಂಡಿಲ್ಲ. ನರೇಂದ್ರ ಮೋದಿ ಅವರ ಬೂಟಾಟಿಕೆ, ನಾಟಕ ಜನರಿಗೆ ಅರ್ಥವಾಗ್ತಿದೆ. ಸ್ವಾತಂತ್ರ್ಯ ಭಾರತದಲ್ಲಿ ಅನೇಕ ಜನ ಪ್ರಧಾನಿಗಳು ಬಂದು ಹೋಗಿದ್ದಾರೆ, ಆದರೆ ಮೋದಿ ಅವರಷ್ಟು ಸುಳ್ಳು ಹೇಳುವ ಪ್ರಧಾನಿ ಯಾರೂ ಇಲ್ಲ. ನರೇಂದ್ರ ಮೋದಿ ಅವರು ಕೊಟ್ಟ ಯಾವುದಾದರೂ ಒಂದು ಭರವಸೆಯನ್ನು ಈಡೇರಿಸಿದ್ದಿದ್ದರೆ ತೋರಿಸಲಿ ನೋಡೋಣ ಎಂದು ಸವಾಲು ಹಾಕಿದರು.


ನರೇಂದ್ರ ಮೋದಿ ಅವರು ಅಚ್ಚೇದಿನ್ ಬರುತ್ತೆ ಅಂದರು, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಗೃಹ ಬಳಕೆಯ ಸಿಲಿಂಡರ್ ಬೆಲೆ ರೂ. 414 ಇತ್ತು, ಇವತ್ತು ಒಂದು ಸಾವಿರ ರೂಪಾಯಿ ಆಗಿದೆ. ಯುಪಿಎ ಸರ್ಕಾರದ ಕೊನೆ ವರ್ಷ ಪೆಟ್ರೋಲ್ ಬೆಲೆ ಲೀಟರ್ ಗೆ ರೂ. 68, ಡೀಸೆಲ್ ಬೆಲೆ ರೂ. 46 ಇತ್ತು. ಇಂದು ಪೆಟ್ರೋಲ್ ಬೆಲೆ 111 ರೂಪಾಯಿ, ಡೀಸೆಲ್ ಬೆಲೆ 97 ರೂಪಾಯಿ ಆಗಿದೆ. ಅಚ್ಚೇದಿನ್ ಕಹಾ ಹೈಜೀ? ಅಂದು ಪೆಟ್ರೋಲ್ ಮೇಲೆ ಹೆಚ್ಚುವರಿ ಅಬಕಾರಿ ತೆರಿಗೆ 9 ರೂಪಾಯಿ 20 ಪೈಸೆ ಇತ್ತು, ಈಗ ಅದು 32 ರೂಪಾಯಿ 98 ಪೈಸೆ ಆಗಿದೆ. ಡೀಸೆಲ್ ಮೇಲೆ ತೆರಿಗೆ 3 ರೂಪಾಯಿ 46 ಪೈಸೆ ಇತ್ತು, ಈಗದು 31 ರೂಪಾಯಿ 84 ಪೈಸೆ ಆಗಿದೆ. ಜನರ ರಕ್ತ ಕುಡಿಯುತ್ತಿದ್ದೀರಲ್ರೀ ನರೇಂದ್ರ ಮೋದಿ ಅವರೇ. ಗೊಬ್ಬರ, ಸಿಮೆಂಟ್, ಕಬ್ಬಿಣ, ಅಡುಗೆ ಎಣ್ಣೆ ಬೆಲೆ ಗಗನಕ್ಕೆ ಮುಟ್ಟಿದೆ.

ರಸಗೊಬ್ಬರ ಬೆಲೆ ಡಿಎಪಿ ಯ ಪ್ರತಿ ಬ್ಯಾಗ್ ಮೇಲೆ 150 ರೂಪಾಯಿ ಏರಿಕೆ ಮಾಡಿದ್ದಾರೆ. ಪ್ರತೀ ವರ್ಷ ದೇಶದ ರೈತರು ಸುಮಾರು 1 ಕೋಟಿ 20 ಲಕ್ಷ ಟನ್ ಗಳಷ್ಟು ಡಿಎಪಿ ಬಳಕೆ ಮಾಡುತ್ತಾರೆ. ಇದರಿಂದ ಸರ್ಕಾರ 3,200 ಕೋಟಿ ರೂಪಾಯಿ ಹೆಚ್ಚುವರಿಯಾಗಿ ರೈತರಿಂದ ಸುಲಿಗೆ ಮಾಡಿದೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದು ಹೇಳಿ ರೈತರ ಸಾಲ ದುಪ್ಪಟ್ಟು ಮಾಡಿದ್ದಾರೆ. ಈ ಬಾರಿ ಚಾಮರಾಜನಗರದ ರೈತರು ಅರಿಶಿಣ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ಪ್ರತಿಭಟನೆ ಮಾಡುತ್ತಿದ್ದಾರೆ, ಧ್ರುವ ನಾರಾಯಣ ಅವರು ತಾವು ಸಂಸದರಾಗಿದ್ದಾಗ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರೊಂದಿಗೆ ಮಾತನಾಡಿ ಮಾರುಕಟ್ಟೆ ಬೆಲೆಗೆ ಅರಿಶಿನ ಖರೀದಿಸುವಂತೆ ಮಾಡಿದ್ದೆ ಎಂದು ಹೇಳಿದರು. ಈ ಸರ್ಕಾರ ಯಾಕೆ ಅದನ್ನು ಮಾಡುತ್ತಿಲ್ಲ? ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಕುರ್ಚಿಯಲ್ಲಿ ಉಳಿಯಲು ಯಾವುದೇ ನೈತಿಕತೆ ಇಲ್ಲ. ತಾವೆಲ್ಲ ಮನೆ ಮನೆಗೆ ಹೋಗಿ ಈ ಭ್ರಷ್ಟ, ದುರಾಡಳಿತದ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಬೇಕು, ಆ ಮೂಲಕ ರಾಜ್ಯವನ್ನು ಉಳಿಸಬೇಕು.


ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗಿಯಾದ ಕಾಂಗ್ರೆಸ್ ನವರನ್ನು ಜೈಲಿಗಾಕಿ ಎಂದು ಬ್ರಿಟಿಷರಿಗೆ ಹೇಳಿಕೊಟ್ಟವರು ಇದೇ ಆರ್.ಎಸ್ಎಸ್ ನವರು. ಇವರು ರಾಷ್ಟ್ರಭಕ್ತರಲ್ಲ, ರಾಷ್ಟ್ರ ದ್ರೋಹಿಗಳು. ನಾವು ಅಧಿಕಾರಕ್ಕೆ ಬರಬೇಕು ಎಂಬುದು ಮುಖ್ಯವಲ್ಲ, ಈ ರಾಜ್ಯ, ದೇಶ, ಸಂವಿಧಾನ ಉಳಿಯಲು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು. ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು, ಹಿಂದೂಗಳ ಮತಗಳನ್ನು ಕ್ರೋಢೀಕರಿಸಲು ಸುಳ್ಳು ಹೇಳಿ ಸಮಾಜದಲ್ಲಿ ದ್ವೇಷದ ಬೀಜ ಬಿತ್ತುವ ಕೆಲಸ ಮಾಡುತ್ತಿದೆ.


ಈ ದೇಶ ಯಾವುದೇ ಒಂದು ಧರ್ಮದವರದ್ದಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲ ಧರ್ಮಗಳ ಜನರು ಹೋರಾಟ ಮಾಡಿದ್ದಾರೆ. ಅದಕ್ಕಾಗಿ ಬಾಬಾ ಸಾಹೇಬರು ಸಂವಿಧಾನದಲ್ಲಿ ಸಹಿಷ್ಣುತೆ ಮತ್ತು ಸಹಬಾಳ್ವೆ ಎಂಬ ತತ್ವಗಳನ್ನು ಕೊಟ್ಟಿದ್ದಾರೆ. ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಅವರು ಹೇಳಿದ್ದಾರೆ. ಆದರೆ ಈ ಬಿಜೆಪಿ, ಆರ್.ಎಸ್.ಎಸ್ ನವರು ಹೀಗೆ ಬದುಕಲು ಬಿಡುತ್ತಿಲ್ಲ. ಕುಮಾರಸ್ವಾಮಿ ಅವರು ಈಶ್ವರಪ್ಪ ಅವರನ್ನು ಏಕೆ ಬಂಧಿಸಬೇಕು ಎಂದು ಹೇಳಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿ ಆಗಿ ಹೇಳುವ ಮಾತಾ ಇದು? ಇಂಥವರಿಗೆ ಜನ ಧಿಕ್ಕಾರ ಹಾಕಬೇಕು. ಈ ಬಿಜೆಪಿ ಮತ್ತು ಅವರಿಗೆ ಬೆಂಬಲವಾಗಿ ನಿಂತವರಿಗೆ ಮುಂದಿನ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.

Join Whatsapp
Exit mobile version