Home ಟಾಪ್ ಸುದ್ದಿಗಳು ರೈತರ ಪ್ರತಿಭಟನೆ ವೀಡಿಯೋ ಟ್ವೀಟ್ ಮಾಡಿ “ನಮ್ಮದೇ ಬಂಧುಗಳು..” ಎಂದ ಸಂಸದ ವರುಣ್ ಗಾಂಧಿ!

ರೈತರ ಪ್ರತಿಭಟನೆ ವೀಡಿಯೋ ಟ್ವೀಟ್ ಮಾಡಿ “ನಮ್ಮದೇ ಬಂಧುಗಳು..” ಎಂದ ಸಂಸದ ವರುಣ್ ಗಾಂಧಿ!

ನವದೆಹಲಿ: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಕೂಡಾ “ನಮ್ಮದೇ ಬಂಧು ಬಾಂಧವರು” ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ. ಅಲ್ಲದೇ, ಕೇಂದ್ರ ಸರಕಾರ ರೈತರ ಜೊತೆ ಮಾತುಕತೆ ನಡೆಸುವಂತೆ ಸಲಹೆ ನೀಡಿದ್ದಾರೆ.

ಉತ್ತರ ಪ್ರದೇಶದ ಮುಝಾಫ್ಫರ್ ನಗರದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ‘ಮಹಾಪಂಚಾಯತ್’ ಹಿನ್ನೆಲೆ ವರುಣ್ ಗಾಂಧಿ ರೈತರ ಪರ ವಹಿಸಿ ಮಾತನಾಡಿದ್ದಾರೆ. ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಪ್ರತಿಭಟನೆ ವೀಡಿಯೋ ಸಹಿತ ಟ್ವೀಟ್ ಮಾಡಿರುವ ಅವರು, “ರೈತರ ನೋವು ಅರ್ಥ ಮಾಡಿಕೊಳ್ಳಬೇಕಿದೆ’ ಎಂದಿದ್ದಾರೆ.

“ಮುಝಾಫ್ಫರ್ ನಗರದಲ್ಲಿ ಇಂದು ನಡೆಯುತ್ತಿರುವ ಪ್ರತಿಭಟನೆಯಲ್ಲಿ ಲಕ್ಷಾಂತರ ಮಂದಿ ಸೇರಿದ್ದಾರೆ. ಅವರೆಲ್ಲರೂ ನಮ್ಮದೇ ಬಂಧು ಬಾಂಧವರು. ಆದ್ದರಿಂದ ಗೌರವಯುತವಾಗಿ ಅವರ ಜೊತೆ ಮರು ಮಾತುಕತೆ ಆರಂಭಿಸಬೇಕು. ಅವರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ಜೊತೆಗೆ ಅವರ ದೃಷ್ಟಿಕೋನವನ್ನು ಅರಿತು ಕೆಲಸ ಮಾಡಬೇಕಿದೆ” ಎಂದು ವರುಣ್ ಗಾಂಧಿ ಟ್ವೀಟಿಸಿದ್ದಾರೆ.   

ರೈತ ಹೋರಾಟಗಾರರ ಬಗ್ಗೆ ಬಿಜೆಪಿ ಸಚಿವರು, ಸಂಸದರು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವ ಮಧ್ಯೆಯೇ ಬಿಜೆಪಿ ಸಂಸದ ವರುಣ್ ಗಾಂಧಿ ರೈತರ ಪರ ವಹಿಸಿ ಟ್ವೀಟ್ ಮಾಡಿದ್ದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

Join Whatsapp
Exit mobile version